Photo Credits: @cineloka (Instagram)
ರಾಮನಗರದಲ್ಲಿ ನಡೆದ ಶ್ರೀ ಚಾಮುಂಡೇಶ್ವರಿ ಕರಗ ಉತ್ಸವದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷವಾಗಿ ಭಾಗವಹಿಸಿದ್ದರು. ಈ ವೇಳೆ ಸುದೀಪ್ ಅವರ ನಡೆ ಹಾಗೂ ಸರಳತೆ ಸಾವಿರಾರು ಅಭಿಮಾನಿಗಳ ಮನ ಗೆದ್ದಿದೆ.
ಸಮಾರಂಭ ನಡೆಯುವ ಸಮಯದಲ್ಲಿ ಜೋರು ಮಳೆ ಸುರಿಯಲು ಆರಂಭವಾಗಿತ್ತು. ಆದರೂ ಪ್ರೇಕ್ಷಕರು ಮಳೆಯಲ್ಲೇ ನಿಂತು ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುತ್ತಿದ್ದರು. ಈ ದೃಶ್ಯ ಕಂಡ ಸುದೀಪ್ ತಾವೂ ಮಳೆಯಲ್ಲಿ ನೆನೆಯಲು ನಿರ್ಧರಿಸಿದರು.
ವೇದಿಕೆ ಮೇಲಿದ್ದ ಆಯೋಜಕರು ಸುದೀಪ್ ಅವರಿಗೆ ಛತ್ರಿ ಹಿಡಿಯಲು ಬಂದಾಗ ಅವರು ಅದನ್ನು ನಯವಾಗಿ ನಿರಾಕರಿಸಿದರು. ಆ ಕ್ಷಣದಲ್ಲಿ ನಡೆದ ಸ್ವಾರಸ್ಯಕರ ಘಟನೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
“ನಾನೂ ಮಳೆಯಲ್ಲಿ ನೆನೆಯುತ್ತೇನೆ”: ಛತ್ರಿ ಪಕ್ಕಕ್ಕಿಟ್ಟು ಸುದೀಪ್ ಸರಳತೆ…
ವೇದಿಕೆ ಮೇಲೆ ಜಿಟಿಜಿಟಿ ಮಳೆ ಮಧ್ಯೆಯೂ ಅಭಿಮಾನಿಗಳು ನೆನೆಯುತ್ತ ನಿಂತಿದ್ದರು. ಇದನ್ನು ಗಮನಿಸಿದ ಸುದೀಪ್, “ನನ್ನ ನೋಡಲು ಜನ ಮಳೆಯಲ್ಲಿ ನಿಂತಿದ್ದಾರೆ. ನಾನು ಛತ್ರಿ ಕೆಳಗೆ ನಿಲ್ಲುವುದು ಸರಿಯಲ್ಲ. ನನಗೂ ಛತ್ರಿ ಬೇಡ, ನಾನೂ ಸ್ವಲ್ಪ ನೆನೆಯುತ್ತೇನೆ” ಎಂದರು. ಆಯೋಜಕರು ಹಿಡಿದಿದ್ದ ಛತ್ರಿಯನ್ನು ಪಕ್ಕಕ್ಕೆ ಸರಿಸಲು ಹೇಳಿ ಸಾಮಾನ್ಯರಂತೆ ಮಳೆಯಲ್ಲೇ ನಿಂತರು. ಅವರ ಈ ನಿರ್ಧಾರ ಕಂಡ ಅಭಿಮಾನಿಗಳು ಗಟ್ಟಿಯಾಗಿ ಚಪ್ಪಾಳೆ ತಟ್ಟಿ ಜೈಕಾರ ಕೂಗಿದರು. ನಂತರ ತಮಗೆ ಮಾಡಲು ಬಂದ ಸನ್ಮಾನವನ್ನೂ ಕಿಚ್ಚ ಅತ್ಯಂತ ಪ್ರೀತಿಯಿಂದ ನಿರಾಕರಿಸಿದರು. ತಮಗೆ ಸನ್ಮಾನ ಮಾಡಲು ಬಂದವರಿಗೇ ಸ್ವತಃ ಶಾಲು ಹೊದಿಸಿ ಗೌರವಿಸಿ ದೊಡ್ಡ ಗುಣ ಮೆರೆದರು.
“ಇದು ಬಿಗ್ ಬಾಸ್ ವೇದಿಕೆ ಅಲ್ಲ”: ನಿರೂಪಕಿ ಅನುಶ್ರೀಗೆ ಕಿಚ್ಚನ ಉತ್ತರ…
ಸಮಾರಂಭದಲ್ಲಿ ಉತ್ಸವದ ಕುರಿತು ಮಾತನಾಡಿದ ಸುದೀಪ್ ಅವರಿಗೆ ನಿರೂಪಕಿ ಅನುಶ್ರೀ ಪ್ರಶ್ನೆಯೊಂದನ್ನು ಕೇಳಿದರು. ಶೀಘ್ರದಲ್ಲೇ ಆರಂಭವಾಗಲಿರುವ ಬಿಗ್ ಬಾಸ್ ಶೋ ಬಗ್ಗೆ ಮಾಹಿತಿಯನ್ನು ನೀಡುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಕಿಚ್ಚ, “ಇದು ಶ್ರೀ ಚಾಮುಂಡೇಶ್ವರಿ ಕರಗ ಉತ್ಸವದ ಪವಿತ್ರ ವೇದಿಕೆ ಆಗಿದೆ” ಎಂದರು. ಬಿಗ್ ಬಾಸ್ ವಿಚಾರ ಹೇಳಲು ಬೇರೆಯದೇ ವೇದಿಕೆ ಇದೆ, ಅಲ್ಲಿಯೇ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಅನಗತ್ಯ ಶೋ ವಿಚಾರ ತರಬಾರದು ಎಂಬ ಅವರ ಆಲೋಚನೆಗೆ ಮೆಚ್ಚುಗೆ ವ್ಯಕ್ತವಾಯಿತು. ಅವರ ಈ ಸಮಯಪ್ರಜ್ಞೆ ಮತ್ತು ಬದ್ಧತೆ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿತು.
‘ಅಯೋಗ್ಯ-2’ ಅಪ್ಡೇಟ್ ನೀಡಿ ಹೆಜ್ಜೆ ಹಾಕಿದ ರಚಿತಾ ರಾಮ್…
ಈ ಅದ್ಧೂರಿ ಕರಗ ಉತ್ಸವಕ್ಕೆ ಕನ್ನಡ ಚಿತ್ರರಂಗದ ಹಲವು ಪ್ರಮುಖ ತಾರೆಯರು ಆಗಮಿಸಿದ್ದರು. ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆ ಮೇಲೆ ಮಿಂಚಿದರು. ತಮ್ಮ ಮುಂಬರುವ ‘ಅಯೋಗ್ಯ-2’ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಮಾಹಿತಿ ನೀಡಿದರು. ಸಿನಿಮಾವನ್ನು ಪ್ರತಿಯೊಬ್ಬರೂ ಚಿತ್ರಮಂದಿರಗಳಲ್ಲೇ ನೋಡಿ ಬೆಂಬಲಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಲೇಡಿ ಪೊಲೀಸ್ ಅಧಿಕಾರಿಯೊಬ್ಬರನ್ನು ಕರೆದು ವಿಶೇಷ ಉಡುಗೊರೆ ನೀಡಿ ಗೌರವಿಸಿದರು. ನಂತರ ತಮ್ಮ ಸೂಪರ್ ಹಿಟ್ ‘ಮುದ್ದು ಮುದ್ದು ಪುಟ್ಟಲಕ್ಷ್ಮಿ’ ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿ ರಂಜಿಸಿದರು.




