CABINET: ಕಾಸು ಕೊಟ್ಟವರಿಗೆ ಮಂತ್ರಿಗಿರಿ – ಕಾಂಗ್ರೆಸ್ ಪಾಳಯದಲ್ಲಿ ಆಡಿಯೋ ಸ್ಫೋಟ !

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಂಪುಟ ಪುನಾರಚನೆಯ ನಂತರದ ರಾಜಕೀಯ ಬೆಳವಣಿಗೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈರಲ್ ಆಡಿಯೋ ತುಣುಕೊಂದು ಪಕ್ಷದ ಆಂತರಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ಹಾಗೂ ಪಕ್ಷದ ಹಿರಿಯ ನಾಯಕರಾದ ಆರ್ .ಬಿ ತಿಮ್ಮಾಪುರ ಮತ್ತು ಎಸ್.ಜಿ ನಂಜಯ್ಯನಮಠ ಅವರ ನಡುವಿನ ಸಂಭಾಷಣೆ ಎನ್ನಲಾದ ಈ ಧ್ವನಿಸುರುಳಿಯಲ್ಲಿ, ಸಂಪುಟ ವಿಸ್ತರಣೆಯ ನಿರ್ಧಾರಗಳು ಮತ್ತು ನಾಯಕತ್ವದ ನಡೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಈ ಆಡಿಯೋದಲ್ಲಿ ಪಕ್ಷದಲ್ಲಿ ಹಿರಿಯರನ್ನು ಯಾವ ರೀತಿ ನಡೆಸಿಕೊಳ್ಳಲಾಗಿದೆ, ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ಹೆಚ್.ಕೆ ಪಾಟೀಲ್ ಅವರ ರೀತಿಯ ಸಮರ್ಥ ನಾಯಕರಿಗೆ ಮಂತ್ರಿ ಸ್ಥಾನ ತಪ್ಪಿಸಲಾಗಿದೆ. ಇನ್ನು ಬಿ ನಾಗೇಂದ್ರ ರೀತಿಯ ವ್ಯಕ್ತಿಗಳಿಗೆ ಮಂತ್ರಿಗಿರಿ ಕೊಟ್ಟಿದ್ದು ಈ ಬಗ್ಗೆ ಪಕ್ಷ ಯಾವ ರೀತಿ ಉತ್ತರಿಸಬೇಕು..? ಕಾಸು ಕೊಟ್ಟವನ್ನು ಮಂತ್ರಿ ಮಾಡಲಾಗಿದೆ, ಎಂಬ ಹಲವು ಸ್ಫೋಟಕ ವಿಚಾರಗಳು ಸದ್ದು ಮಾಡುತ್ತಿದೆ .

ಈ ಬೆಳವಣಿಗೆಯಿಂದಾಗಿ ಆಡಳಿತಾರೂಢ ಕಾಂಗ್ರೆಸ್ ಶಾಸಕರ ನಡುವೆ ಇರುವ ಭಿನ್ನಾಭಿಪ್ರಾಯಗಳು ಮತ್ತೆ ಬಹಿರಂಗವಾಗಿದ್ದು, ಆಡಳಿತ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಹೌದು ಸಂಪುಟ ಬದಲಾವಣೆಯ ಸಂದರ್ಭದಲ್ಲಿ ಹಿರಿಯರನ್ನು ಮತ್ತು ನಿಷ್ಠಾವಂತ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಈ ವೈರಲ್ ಸಂಭಾಷಣೆಯಿಂದ ಮತ್ತಷ್ಟು ಬಲಪಡೆದುಕೊಂಡಿವೆ. ಪ್ರಭಾವಿ ನಾಯಕರ ಶಿಫಾರಸು ಹಾಗೂ ಪಕ್ಷದ ಹೈಕಮಾಂಡ್ ಹಂತದ ನಿರ್ಧಾರಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರು, ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಪ್ರದರ್ಶಿಸುತ್ತಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಪಕ್ಷದ ವರಿಷ್ಠರು ಮತ್ತು ಉಸ್ತುವಾರಿ ನಾಯಕರು ಪ್ರಯತ್ನ ನಡೆಸುತ್ತಿದ್ದರೂ, ಈ ವೈರಲ್ ಆಡಿಯೋ ಪ್ರಕರಣ ಶಾಸಕರ ಪಡೆ ಹಾಗೂ ಸಚಿವ ಸ್ಥಾನದ ಆಕಾಂಕ್ಷಿಗಳ ನಡುವಿನ ಕಂದಕವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಅಧಿಕಾರ ಹಂಚಿಕೆ ಮತ್ತು ಸಂಪುಟ ಪುನಾರಚನೆ ಯಾವುದೇ ಆಡಳಿತ ಪಕ್ಷಕ್ಕಾದರೂ ತೀವ್ರ ಸವಾಲಿನ ಹಂತವಾಗಿದೆ ಎಂಬುದು ಸ್ಪಷ್ಟ. ಸರ್ಕಾರ ರಚನೆಯಾಗಿ ನಿರ್ದಿಷ್ಟ ಅವಧಿ ಪೂರ್ಣಗೊಂಡ ನಂತರ ಶಾಸಕರಲ್ಲಿ ಸಚಿವ ಸ್ಥಾನದ ಆಕಾಂಕ್ಷೆ ಹೆಚ್ಚಾಗುವುದು ಸಹಜ. ಆದರೆ, ಇಂತಹ ತೀವ್ರ ಆಂತರಿಕ ಚರ್ಚೆಗಳು ಹಾಗೂ ಖಾಸಗಿ ಸಂಭಾಷಣೆಗಳು ಆಡಿಯೋ ರೂಪದಲ್ಲಿ ಸೋರಿಕೆಯಾಗುವುದು ಪಕ್ಷದ ಶಿಸ್ತು ಮತ್ತು ಆಡಳಿತದ ಸ್ಥಿರತೆಯ ಮೇಲಿನ ಜನಸಾಮಾನ್ಯರ ನಂಬಿಕೆಯನ್ನು ಕುಸಿಯುವಂತೆ ಮಾಡುತ್ತದೆ.

ಇಂತಹ ಆಂತರಿಕ ಭಿನ್ನಾಭಿಪ್ರಾಯಗಳು ಕೇವಲ ರಾಜಕೀಯ ಮೇಲಾಟಕ್ಕೆ ಸೀಮಿತವಾಗದೆ, ರಾಜ್ಯದ ಅಭಿವೃದ್ಧಿ ಹಾಗೂ ಆಡಳಿತದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನವನ್ನು ಕೇವಲ ಎಚ್ಚರಿಕೆಗಳಿಂದ ದಮನಿಸುವ ಬದಲು ಮಾತುಕತೆಯ ಮೂಲಕ ಶಮನಗೊಳಿಸುವುದು ಅತ್ಯಗತ್ಯವಾಗಿದೆ. ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆಯಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನವನ್ನು ಕಾಯ್ದುಕೊಳ್ಳುವುದರ ಜೊತೆಗೆ, ನಾಯಕತ್ವದ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸುವುದು, ಈ ಆರೋಪಗಳಿಗೆ ಉತ್ತರಿಸಬೇಕಿರುವುದು ಪ್ರಸ್ತುತ ಸರ್ಕಾರದ ಜವಾಬ್ದಾರಿಯಾಗಿದೆ.