ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮುರಗೇಶ್ ನಿರಾಣಿ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನದ ವಾತಾವರಣ ಮತ್ತಷ್ಟು ಗಾಢವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನಕ್ಕಾಗಿ ಆಡಳಿತ ಪಕ್ಷದ ಅನೇಕ ಶಾಸಕರು ನಿರೀಕ್ಷೆಯಲ್ಲಿದ್ದು, ಎಲ್ಲರಿಗೂ ಅವಕಾಶ ಕಲ್ಪಿಸುವುದು ಅಸಾಧ್ಯ ಎಂಬುದು ವಾಸ್ತವ. ಸೀಮಿತ ಶಾಸಕರಿಗೆ ಮಾತ್ರ ಸ್ಥಾನ ದೊರೆಯುವ ಹಿನ್ನೆಲೆಯಲ್ಲಿ ಉಳಿದವರಲ್ಲಿ ಅತೃಪ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ಬೆಳವಣಿಗೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನೊಳಗಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಹಿರಿಯ ನಾಯಕರು ಸಂಪೂರ್ಣ ಅರಿವು ಹೊಂದಿದ್ದಾರೆ ಎಂದು ನಿರಾಣಿ ತಿಳಿಸಿದ್ದಾರೆ. ತಕ್ಷಣದ ರಾಜಕೀಯ ಬದಲಾವಣೆಗಳಿಗಿಂತ ಮುಂದಿನ ದಿನಗಳಲ್ಲಿ ಕೆಲವು ನಾಯಕರು ಪರ್ಯಾಯ ರಾಜಕೀಯ ಭವಿಷ್ಯ ಹುಡುಕುವ ಸಾಧ್ಯತೆ ಇರುವುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಕೆಲವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದ ಅವರು, ಯಾವುದೇ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮುನ್ನ ಸ್ಥಳೀಯ ಕಾರ್ಯಕರ್ತರು, ಹಾಲಿ ಮುಖಂಡರು ಹಾಗೂ ಕ್ಷೇತ್ರದ ಜನಾಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸರ್ಕಾರ ತನ್ನ ಪೂರ್ಣಾವಧಿಯನ್ನು ಪೂರ್ಣಗೊಳಿಸಬೇಕು ಎಂಬುದು ಬಿಜೆಪಿಯ ನಿಲುವು ಎಂದು ನಿರಾಣಿ ಹೇಳಿದ್ದಾರೆ. ಆದರೆ ಆಡಳಿತ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ರಾಜಕೀಯ ಬೆಳವಣಿಗೆಗಳಿಗೆ ಕಾರಣವಾದರೆ ಅದಕ್ಕೆ ಬಿಜೆಪಿಯನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂಬ ಸಂದೇಶವನ್ನೂ ನೀಡಿದ್ದಾರೆ. ಸರ್ಕಾರದ ಭವಿಷ್ಯವನ್ನು ನಿರ್ಧರಿಸುವುದು ಕಾಂಗ್ರೆಸ್ ಆಂತರಿಕ ಕಿತ್ತಾಟ ಎಂದಿದ್ದಾರೆ.
ಸಂಪುಟ ವಿಸ್ತರಣೆ & ಖಾತೆ ಹಂಚಿಕೆ ವೇಳೆ ಪ್ರಾದೇಶಿಕ, ಜಾತಿ ಹಾಗೂ ರಾಜಕೀಯ ಸಮತೋಲನ ಕಾಪಾಡುವ ಸವಾಲು ಆಡಳಿತ ಪಕ್ಷದ ಮುಂದೆ ಇರುತ್ತದೆ. ಇದೇ ಕಾರಣದಿಂದ ಅವಕಾಶ ವಂಚಿತರಾದ ಶಾಸಕರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಹೊಸ ಲೆಕ್ಕಾಚಾರ ನಡೆಸುವುದು ಸಹಜ. ಆದರೆ ಪಕ್ಷಾಂತರದಂತಹ ನಿರ್ಧಾರಗಳು ಕೇವಲ ಅಸಮಾಧಾನದಿಂದ ಮಾತ್ರ ಆಗುವುದಿಲ್ಲ; ಕ್ಷೇತ್ರದ ರಾಜಕೀಯ ಪರಿಸ್ಥಿತಿ, ಮುಂದಿನ ಚುನಾವಣೆಯ ಸಾಧ್ಯತೆ ಹಾಗೂ ಜನರ ಬೆಂಬಲವೂ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಒಳರಾಜಕೀಯ ಯಾವ ದಿಕ್ಕಿನಲ್ಲಿ ಸಾಗುತ್ತದೆ ಕಾದುನೋಡಬೇಕಿದೆ.



