ಕರ್ನಾಟಕ ರಾಜ್ಯ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯ ಚಟುವಟಿಕೆಗಳು ಈಗ ಅಂತಿಮ ಹಂತವನ್ನು ತಲುಪಿವೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಪ್ರಮುಖ ಸಮಾಲೋಚನಾ ಸಭೆ ಮುಕ್ತಾಯವಾಗಿದೆ. ಈ ಉನ್ನತ ಮಟ್ಟದ ಭೇಟಿಯಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ ರಾಹುಲ್ ಗಾಂಧಿ ಅವರ ಉಪಸ್ಥಿತಿಯಲ್ಲಿ ರಾಜ್ಯದ ಹಿರಿಯ ನಾಯಕರೊಂದಿಗೆ ಸುದೀರ್ಘ ಚಾರ್ವೆ ನಡೆಸಲಾಗಿದೆ.
ಈ ಮಹತ್ವದ ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಹಾಗೂ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪಾಲ್ಗೊಂಡು ನೂತನ ಸಚಿವರ ಆಯ್ಕೆಯ ಅಂತಿಮ ಹಂತದ ಚರ್ಚೆ ನಡೆಸಿದರು. ಸತತ ನಾಲ್ಕು ದಿನಗಳ ಕಾಲ ದೆಹಲಿಯಲ್ಲಿಯೇ ಬೀಡುಬಿಟ್ಟಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು (ಜುಲೈ.30) ರಾತ್ರಿಯೇ ಬೆಂಗಳೂರಿಗೆ ಆಗಮಿಸಲಿದ್ದು, ಆಗಸ್ಟ್ 3ರಂದು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ.
ಈ ಸಂಪುಟ ವಿಸ್ತರಣೆ ಕೇವಲ ಶಾಸಕರಿಗೆ ಸ್ಥಾನಮಾನ ನೀಡುವುದಷ್ಟೇ ಅಲ್ಲದೆ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೈಗೊಂಡಿರುವ ರಾಜಕೀಯ ತಂತ್ರಗಾರಿಕೆಯಾಗಿದೆ. ವಿವಿಧ ಸಮುದಾಯಗಳ ಪ್ರಾತಿನಿಧ್ಯವನ್ನು ಕಾಯ್ದುಕೊಳ್ಳುವುದು ಮತ್ತು ಪ್ರಾದೇಶಿಕ ಅಸಮತೋಲನವನ್ನು ಸರಿದೂಗಿಸುವುದು ಕಾಂಗ್ರೆಸ್ ಹೈಕಮಾಂಡ್ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಿರಿಯ ನಾಯಕರ ಬೆಂಬಲಿಗರು ಮತ್ತು ಯುವ ಶಾಸಕರ ನಡುವೆ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿರುವುದು ವರಿಷ್ಠರ ಮೇಲಿನ ಒತ್ತಡವನ್ನು ಹೆಚ್ಚಿಸಿದೆ.
ಆದಾಗ್ಯೂ, ಸಂಪುಟ ವಿಸ್ತರಣೆ ನಂತರ ಅವಕಾಶ ಸಿಗದ ಅಸಮಾಧಾನಿತ ಶಾಸಕರನ್ನು ಶಾಂತಗೊಳಿಸುವುದು ಮತ್ತು ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳು ಬಹಿರಂಗಗೊಳ್ಳದಂತೆ ತಡೆಯುವುದು ಕಾಂಗ್ರೆಸ್ ಹೈಕಮಾಂಡ್ ಗೆ ಅತ್ಯಗತ್ಯವಾಗಿದೆ. ಆಗಸ್ಟ್ 3ರಂದು ನಡೆಯಲಿರುವ ಈ ಸಂಪುಟ ಸೇರ್ಪಡೆ ಕಾಂಗ್ರೆಸ್ ಪಕ್ಷದ ಆಡಳಿತ ಶೈಲಿ ಮತ್ತು ಪಕ್ಷದ ಭವಿಷ್ಯದ ದಾರಿಗೆ ಹೊಸ ದಿಕ್ಸೂಚಿಯಾಗಲಿದೆ.



