BJP: ಪ್ರಧಾನ್ ಆಯ್ತು..ನೆಕ್ಸ್ಟ್ ಗಡ್ಕರಿ..! – ಜಾಲತಾಣಗಳಲ್ಲಿ ಟ್ರೋಲ್-ಮೀಮ್ಸ್‌ಗಳ ಧಮಾಕಾ

ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್ ಯುಜಿ) ಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಸರಣಿ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಯಿಂದ ನಿರ್ಗಮಿಸುತ್ತಿದ್ದಂತೆ, ಎಕ್ಸ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ನೆಟ್ಟಿಗರು ಕಟು ವ್ಯಂಗ್ಯಗಳ ಸುರಿಮಳೆಗೈದಿದ್ದಾರೆ. ಸಚಿವರ ನಿರ್ಗಮನದ ಅಧಿಕೃತ ಪ್ರಕಟಣೆ ಹೊರಬಿದ್ದ ತಕ್ಷಣವೇ ಲಕ್ಷಾಂತರ ಯುವಜನರು ಹಾಗೂ ಸಾರ್ವಜನಿಕರು ಪ್ರತಿಕ್ರಿಯೆಗಳ ಸುರಿಮಳೆಗೈದಿದ್ದು, ಕಮೆಂಟ್ ವಿಭಾಗ ಅಕ್ಷರಶಃ ಹಾಸ್ಯ ಮತ್ತು ಟೀಕೆಗಳ ತಾಣವಾಗಿ ಮಾರ್ಪಟ್ಟಿತು. ದೇಶದ ಅತ್ಯಂತ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭ್ರಷ್ಟಾಚಾರ ನಡೆದು ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ್ದಕ್ಕೆ ಕಡೆಗೂ ಸಚಿವರ ತಲೆದಂಡವಾಗಿದೆ ಎಂದು ನೆಟ್ಟಿಗರು ಈ ನಿರ್ಧಾರವನ್ನು ಸ್ವಾಗತಿಸಿ ವಿವಿಧ ಮೀಮ್ಸ್‌ಗಳ ಮೂಲಕ ಸಂಭ್ರಮಿಸಿದರು.

ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಬಹುತೇಕ ಪೊಸ್ಟ್‌ಗಳು ಸರ್ಕಾರದ ಈ ತಡವಾದ ನಿರ್ಧಾರವನ್ನು ವ್ಯಂಗ್ಯವಾಡುತ್ತಿದ್ದು, ಇದು ಕೇವಲ ಆರಂಭವಷ್ಟೇ, ಮುಂದೆ ಮತ್ತಷ್ಟು ಸಚಿವರ ಸರದಿ ಬರಲಿದೆ ಎಂಬ ರೀತಿಯ ಸಂದೇಶಗಳನ್ನು ರವಾನಿಸುತ್ತಿವೆ. ಪ್ರಧಾನಿಯವರ ನಡೆಗೆ ಕೆಲವರು ಮಾರ್ಮಿಕವಾಗಿ ಮೆಚ್ಚುಗೆ ಸೂಚಿಸಿದ್ದರೆ, ಇನ್ನು ಕೆಲವರು ರಸ್ತೆ ಮತ್ತು ಹೆದ್ದಾರಿ ಇಲಾಖೆಯಂತಹ ಇತರೆ ಮಹತ್ವದ ಇಲಾಖೆಗಳಲ್ಲಿನ ಲೋಪದೋಷಗಳನ್ನು, E20 ಇಂಧನಕ್ಕೆ ಸಂಬಂಧಪಟ್ಟಂತೆ ಪ್ರಸ್ತಾಪಿಸಿ ಮುಂದಿನ ಸಚಿವರ ರಾಜೀನಾಮೆಗೆ ಆಗ್ರಹಿಸಿ ಹಾಸ್ಯಸ್ಪಂದನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಆಕ್ರೋಶಕ್ಕೆ ಕೊನೆಗೂ ಆಡಳಿತ ಪಕ್ಷ ನಮಿಸಿದೆ ಎಂಬ ಭಾವನೆ ಈ ಸಾಮಾಜಿಕ ಮಾಧ್ಯಮಗಳ ಟ್ರೆಂಡಿಂಗ್ ಪೋಸ್ಟ್‌ಗಳಲ್ಲಿ ಎದ್ದು ಕಾಣುತ್ತಿತ್ತು.

ಈ ರಾಜಕೀಯ ಬೆಳವಣಿಗೆಯನ್ನು ಆಳವಾಗಿ ವಿಶ್ಲೇಷಿಸುವುದಾದರೆ, ಪ್ರಸ್ತುತ ಕೇಂದ್ರ ಸರ್ಕಾರ ಯುವಜನತೆಯ ಅಸಮಾಧಾನ ಮತ್ತು ಸಾರ್ವಜನಿಕ ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಶಿಕ್ಷಣ ಕ್ಷೇತ್ರದಂತಹ ಅತ್ಯಂತ ಸೂಕ್ಷ್ಮ ವಿಷಯಗಳಲ್ಲಿ ಪದೇ ಪದೇ ನಡೆಯುವ ಪಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳು ಆಡಳಿತಾರೂಢ ಮೈತ್ರಿಕೂಟದ ರಾಜಕೀಯ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡಿದ್ದವು. ಸಚಿವರ ರಾಜೀನಾಮೆ ಕೇವಲ ಒಬ್ಬ ವ್ಯಕ್ತಿಯ ನಿರ್ಗಮನವಲ್ಲ, ಬದಲಿಗೆ ಬೃಹತ್ ಪರೀಕ್ಷಾ ವ್ಯವಸ್ಥೆಯಲ್ಲಿ ನೆಲೆಸಿರುವ ಸಾಂಸ್ಥಿಕ ವೈಫಲ್ಯ ಹಾಗೂ ಭ್ರಷ್ಟಾಚಾರದ ವಿರುದ್ಧದ ಜನಾಕ್ರೋಶಕ್ಕೆ ಸಿಕ್ಕ ತಾತ್ಕಾಲಿಕ ಜಯವಾಗಿದೆ.

ಆದಾಗ್ಯೂ, ಕೇವಲ ಸಚಿವರ ಹುದ್ದೆ ತ್ಯಾಗದಿಂದ ಪರೀಕ್ಷಾ ವ್ಯವಸ್ಥೆಯಲ್ಲಿನ ದೋಷಗಳು ತಾನಾಗಿಯೇ ಪರಿಹಾರವಾಗುವುದಿಲ್ಲ ಎಂಬುದು ರಾಜಕೀಯ ತಜ್ಞರ ಸ್ಪಷ್ಟ ಅಭಿಪ್ರಾಯವಾಗಿದೆ. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತನ್ನ ವರ್ಚಸ್ಸನ್ನು ಉಳಿಸಿಕೊಳ್ಳಲು ಈ ಬಲಿಪಶು ತಂತ್ರ ಅನುಸರಿಸಿರಬಹುದು ಎಂಬ ಸಂಶಯವೂ ವ್ಯಕ್ತವಾಗುತ್ತಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮೂಲಭೂತ ಪುನಾರಚನೆ ಮತ್ತು ಪಾರದರ್ಶಕ ನೀತಿಗಳನ್ನು ತಕ್ಷಣವೇ ಜಾರಿಗೆ ತರದಿದ್ದರೆ, ಇಂತಹ ರಾಜೀನಾಮೆಗಳು ಕೇವಲ ರಾಜಕೀಯ ರಕ್ಷಣಾ ಕವಚವಾಗಿ ಉಳಿಯುತ್ತವೆಯೇ ವಿನಃ ಲಕ್ಷಾಂತರ ಆಕಾಂಕ್ಷಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಿಲ್ಲ.