MAHARASHTRA: ಬೆಳಗಾವಿ ಗಡಿ ವಿವಾದಕ್ಕೆ ಮರುಜೀವ – ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾದ ಮಹಾರಾಷ್ಟ್ರ

ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿ ಗಡಿ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ಪ್ರಚೋದನಾತ್ಮಕ ಹೆಜ್ಜೆಯಿಟ್ಟಿದೆ. ಮುಂಬೈನ ವಿಧಾನಭವನದಲ್ಲಿ ಆಯೋಜಿಸಲಾಗಿದ್ದ ಉನ್ನತ ಮಟ್ಟದ ಸಭೆಯ ಮಾತನಾಡಿದ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್, ಕಳೆದ ಎರಡು ದಶಕಗಳಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಗಡಿ ವ್ಯಾಜ್ಯದ ತುರ್ತು ವಿಚಾರಣೆಗೆ ಆಗ್ರಹಿಸಿ ಹೊಸದಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಕರ್ನಾಟಕದ ಗಡಿ ಭಾಗದಲ್ಲಿ ಸಕ್ರಿಯವಾಗಿರುವ ಮರಾಠಿ ಭಾಷಿಕರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ನೆರೆ ರಾಜ್ಯ ಸರ್ಕಾರ, ಅಲ್ಲಿನ ಮರಾಠಿ ಹೋರಾಟಗಾರರ ಮೇಲಿರುವ ಕಾನೂನು ಮೊಕದ್ದಮೆಗಳಿಗೆ ಉಚಿತ ವಕೀಲರ ಸೇವೆ ಹಾಗೂ ಪೂರ್ಣ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ. ಅಲ್ಲದೆ ಸಂಸದರ ನಿಯೋಗದ ಮೂಲಕ ರಾಷ್ಟ್ರೀಯ ಭಾಷಾ ಅಲ್ಪಸಂಖ್ಯಾತರ ಆಯೋಗಕ್ಕೆ ದೂರು ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಹೀಗೆ ಕಾನೂನಾತ್ಮಕ ಹೋರಾಟದ ಜೊತೆಜೊತೆಗೆ ಈ ಸಂಘರ್ಷವನ್ನು ಮಾತುಕತೆಯ ಮೂಲಕ ಬಗೆಹರಿಸಲು ಕೇಂದ್ರ ಗೃಹ ಸಚಿವರ ಮಧ್ಯಸ್ಥಿಕೆಯನ್ನು ಕೋರಲು ಮುಂದಾಗಿದ್ದಾರೆ. ಉಭಯ ರಾಜ್ಯಗಳ ತಲಾ ಮೂವರು ಮಂತ್ರಿಗಳನ್ನೊಳಗೊಂಡ ಜಂಟಿ ಸಭೆಯೊಂದನ್ನು ಆಯೋಜಿಸುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯುವುದಾಗಿ ಫಡ್ನವೀಸ್ ಪ್ರಕಟಿಸಿದ್ದಾರೆ. ಈ ಸಭೆಯಲ್ಲಿ ಸುಮಾರು ಮೂವತ್ತು ವರ್ಷಗಳ ಸುದೀರ್ಘ ಅವಧಿಯ ನಂತರ ಹಿರಿಯ ನಾಯಕ ಶರದ್ ಪವಾರ್ ಅವರು ಪಾಲ್ಗೊಂಡು ಸರ್ಕಾರದ ಈ ನಿರ್ಧಾರಗಳಿಗೆ ತಾವೂ ಧ್ವನಿಗೂಡಿಸಿರುವುದು ಈ ವಿಶೇಷವಾಗಿದೆ.

ಮಹಾರಾಷ್ಟ್ರದ ಇತ್ತೀಚಿನ ಈ ಗಡಿ ಸಕ್ರಿಯತೆ ಕೇವಲ ಭಾಷಾಭಿಮಾನದಿಂದ ಮೂಡಿಬಂದಿದ್ದಲ್ಲ, ಬದಲಿಗೆ ಅಲ್ಲಿನ ಆಂತರಿಕ ರಾಜಕೀಯದ ದಿಕ್ಸೂಚಿಯಾಗಿದೆ. ಮಹಾರಾಷ್ಟ್ರದಲ್ಲಿ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಅಥವಾ ಪ್ರಾದೇಶಿಕ ಅಸ್ಮಿತೆಯ ವಿಷಯ ಮುನ್ನೆಲೆಗೆ ಬಂದಾಗಲೆಲ್ಲಾ ಅಲ್ಲಿನ ಆಡಳಿತಾರೂಢ ಮೈತ್ರಿಕೂಟ ಮತ್ತು ಪ್ರತಿಪಕ್ಷಗಳು ಒಟ್ಟಾಗಿ ಬೆಳಗಾವಿ ಗಡಿ ವಿವಾದವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುವುದು ದಶಕಗಳ ಇತಿಹಾಸ. ಸದಾ ಭಿನ್ನಾಭಿಪ್ರಾಯ ಹೊಂದಿರುವ ಫಡ್ನವೀಸ್ ಮತ್ತು ಶರದ್ ಪವಾರ್ ಅವರಂತಹ ನಾಯಕರು ಈ ವಿಷಯದಲ್ಲಿ ಒಂದೇ ವೇದಿಕೆಯಲ್ಲಿ ಕೈಜೋಡಿಸಿರುವುದು ಮಹಾರಾಷ್ಟ್ರದಲ್ಲಿ ಪ್ರಾದೇಶಿಕ ಭಾವನೆಗಳನ್ನು ಕೆರಳಿಸಿ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ಸ್ಪಷ್ಟ ತಂತ್ರಗಾರಿಕೆಯನ್ನು ಬಿಂಬಿಸುತ್ತದೆ.

ಕರ್ನಾಟಕದ ಪಾಲಿಗೆ ಇದು ಅತ್ಯಂತ ಸೂಕ್ಷ್ಮ ಹಾಗೂ ಗಂಭೀರ ಸವಾಲಾಗಿದ್ದು, ರಾಜ್ಯ ಸರ್ಕಾರ ಕಾನೂನು ಮತ್ತು ರಾಜತಾಂತ್ರಿಕ ರಂಗಗಳಲ್ಲಿ ತಕ್ಕ ಪ್ರತ್ಯುತ್ತರ ನೀಡಬೇಕಾದ ಅನಿವಾರ್ಯತೆ ಇದೆ. ಮಹಾಜನ್ ವರದಿ ಈಗಾಗಲೇ ಬೆಳಗಾವಿ ಕರ್ನಾಟಕದ ಭಾಗ ಎಂದು ಸ್ಪಷ್ಟಪಡಿಸಿದ್ದರೂ, ಮಹಾರಾಷ್ಟ್ರ ಪದೇ ಪದೇ ಈ ವಿಷಯವನ್ನು ಜೀವಂತವಾಗಿಡಲು ಯತ್ನಿಸುತ್ತಿದೆ. ಕೇಂದ್ರದಲ್ಲಿರುವ ಪ್ರಭಾವಿ ನಾಯಕರನ್ನು ಬಳಸಿಕೊಂಡು ಸಚಿವರ ಮಟ್ಟದ ಮಾತುಕತೆಗೆ ಒತ್ತಡ ಹೇರುತ್ತಿರುವ ಮಹಾರಾಷ್ಟ್ರ ನಿಲುವನ್ನು ಕರ್ನಾಟಕ ಅತ್ಯಂತ ಜಾಗರೂಕತೆಯಿಂದ ನಿಭಾಯಿಸಬೇಕಿದೆ. ಯಾವುದೇ ಕಾರಣಕ್ಕೂ ಗಡಿ ರಕ್ಷಣೆಯ ವಿಷಯದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ರಾಜ್ಯದ ಹಿತಾಸಕ್ತಿಯನ್ನು ಎತ್ತಿಹಿಡಿಯುವ ದೃಢ ಸಂಕಲ್ಪವನ್ನು ಕರ್ನಾಟಕದ ರಾಜಕಾರಣಿಗಳು ಪ್ರದರ್ಶಿಸಬೇಕಾಗಿದೆ.