CAUVERY DISPUTE : ಮಂಡ್ಯದಲ್ಲಿ ಹೆಚ್ಚಾದ ಕಾವೇರಿ ಕಿಚ್ಚು – ಚಿತ್ರಮಂದಿರದಿನ ‘ಜನ ನಾಯಗನ್‘ ಎತ್ತಂಗಡಿ

ತಮಿಳುನಾಡು ಸರ್ಕಾರ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತೋರುತ್ತಿರುವ ಕಠಿಣ ನಿಲುವನ್ನು ಖಂಡಿಸಿ ಮಂಡ್ಯ ನಗರದಲ್ಲಿ ವ್ಯಾಪಕ ಜನಪ್ರತಿಭಟನೆ ವ್ಯಕ್ತವಾಗಿದೆ. ಸ್ಥಳೀಯ ಗುರುಶ್ರೀ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ‘ಜನ ನಾಯಗನ್’ ಚಲನಚಿತ್ರದ ವಿರುದ್ಧ ವಿಜಯಸೇನೆ ಸಂಘಟನೆ ಮುಖಂಡ ದೀಪಕ್ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೀದಿಗಿಳಿದು ಆಕ್ರೋಶ ಹೊರಹಾಕಿದರು. ಚಿತ್ರಮಂದಿರದ ಮುಂದೆ ಅಳವಡಿಸಲಾಗಿದ್ದ ಬೃಹತ್ ಪೋಸ್ಟರ್‌ಗಳನ್ನು ಕಿತ್ತೆಸೆದು ಹರಿದು ಹಾಕಿದ ಪ್ರತಿಭಟನಾಕಾರರು, ತಮಿಳುನಾಡು ನಾಯಕರ ಚಿತ್ರಗಳಿಗೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಚಿತ್ರಮಂದಿರದ ಮಾಲೀಕರು ಸಿನಿಮಾ ಪ್ರದರ್ಶನವನ್ನು ತಕ್ಷಣವೇ ಸ್ಥಗಿತಗೊಳಿಸಿದರು.

ರಾಜ್ಯಕ್ಕೆ ನಿರಂತರವಾಗಿ ನೀರಾವರಿ ಮತ್ತು ಕುಡಿಯುವ ನೀರಿನ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂಬ ಭಾವನೆ ಗಡಿ ಜಿಲ್ಲೆಗಳ ಜನರಲ್ಲಿ ತೀವ್ರ ಸಿಟ್ಟನ್ನು ಹುಟ್ಟುಹಾಕಿದೆ. ಕಾವೇರಿ ಕೊಳ್ಳದ ಸಕ್ಕರೆ ನಾಡು ಮಂಡ್ಯದಲ್ಲಿ ರೈತರ ಹೋರಾಟಗಳು ನಿರಂತರವಾಗಿ ನಡೆಯುತ್ತಲೇ ಬಂದಿದ್ದು, ಈಗ ಮತ್ತೆ ಆಕ್ರೋಶ ಸ್ಫೋಟಗೊಂಡಿದೆ. ಸಾರ್ವಜನಿಕ ಆಸ್ತಿಪಾಸ್ತಿ ಮತ್ತು ಚಿತ್ರಮಂದಿರಗಳ ಸುರಕ್ಷತೆಯ ಹಿತದೃಷ್ಟಿಯಿಂದ ಪ್ರದರ್ಶನವನ್ನು ರದ್ದುಗೊಳಿಸಿದ್ದು ಕನ್ನಡಪರ ಸಂಘಟನೆ ಹೋರಾಟಗಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಈ ರೀತಿಯ ಪ್ರತಿಭಟನೆ ಮೂಲಕ ಕಾಂಗ್ರೆಸ್ ಸರ್ಕಾರದ ಮೇಲೆ ರಾಜಕೀಯ ಒತ್ತಡ ಹೇರಲು ಹೋರಾಟಗಾರರು ಮುಂದಾಗಿದ್ದಾರೆ. ಈ
ಎರಡು ನೆರೆ ರಾಜ್ಯಗಳ ನಡುವಿನ ಜಲ ವ್ಯಾಜ್ಯವನ್ನು ಬಗೆಹರಿಸಲು ಕೇವಲ ರಸ್ತೆಗಿಳಿದು ನಡೆಸುವ ಉಗ್ರ ಹೋರಾಟಗಳು ಮತ್ತು ಸಿನೆಮಾ ಪ್ರದರ್ಶನ ತಡೆಗಳು ಶಾಶ್ವತ ಪರಿಹಾರ ತರಲಾರವು. ಕಾನೂನಾತ್ಮಕ ಹೋರಾಟ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂಭಾಗದಲ್ಲಿ ಸೂಕ್ತ ತಾಂತ್ರಿಕ ಸತ್ಯಾಸತ್ಯತೆಗಳ ಮಂಡನೆ ಹಾಗೂ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಮಟ್ಟದಲ್ಲಿ ಸೌಹಾರ್ದಯುತ ಮಾತುಕತೆ ನಡೆಸುವುದು ಅಗತ್ಯವಾಗಿದೆ. ರಾಜ್ಯದ ರೈತರ ಹಿತಾಸಕ್ತಿಯನ್ನು ಕಾಯುವುದರ ಜೊತೆಗೆ, ಸಾರ್ವಜನಿಕ ಶಾಂತಿಯನ್ನು ಕಾಪಾಡಿಕೊಂಡು ಕಾನೂನು ಮಾರ್ಗದ ಮೂಲಕ ನೀರಿನ ನ್ಯಾಯಯುತ ಪಾಲು ಪಡೆಯದ ಹೊರತು ಈ ಸಮಸ್ಯೆ ಬಗೆಹರಿಯುವ ಲಕ್ಷ್ಮಣ ಗೋಚರಿಸುತ್ತಿಲ್ಲ.