ಭಾರತದಲ್ಲಿ ಪ್ರಸ್ತುತ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಮುಂಬರುವ ಡಿಸೆಂಬರ್ ವೇಳೆಗೆ ತಮ್ಮ ತಾಯ್ನಾಡಿಗೆ ಮರಳುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕಳೆದ 2024ರ ಆಗಸ್ಟ್ ತಿಂಗಳಿನಲ್ಲಿ ನಡೆದ ಭಾರಿ ವಿದ್ಯಾರ್ಥಿ ದಂಗೆ ಮತ್ತು ಸಾರ್ವಜನಿಕ ಆಕ್ರೋಶಕ್ಕೆ ಮಣಿದು ದೇಶ ತೊರೆದಿದ್ದ 78 ವರ್ಷದ ಹಸೀನಾ, ತಮ್ಮ ಈ ಪ್ರವಾಸದ ವೇಳೆ ಎದುರಾಗಬಹುದಾದ ಬಂಧನ ಅಥವಾ ಜೀವಭಯದಂತಹ ಯಾವುದೇ ಗಂಭೀರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರುವುದಾಗಿ ಅಬ್ಬರಿಸಿದ್ದಾರೆ. ಸ್ವದೇಶಕ್ಕೆ ಹಿಂತಿರುಗಿದ ತಕ್ಷಣ ಅಲ್ಲಿನ ಸ್ಥಳೀಯ ನ್ಯಾಯಾಂಗ ವ್ಯವಸ್ಥೆಯ ಮುಂದೆ ಶರಣಾಗತಿಯಾಗುವುದಾಗಿ ಸ್ಪಷ್ಟಪಡಿಸಿರುವ ಅವರು, ಪ್ರಸ್ತುತ ಢಾಕಾದಲ್ಲಿ ಅಧಿಕಾರದಲ್ಲಿರುವ ಮಧ್ಯಂತರ ಸರ್ಕಾರದೊಂದಿಗೆ ಈ ಕುರಿತು ತಮ್ಮ ಪಕ್ಷ ಯಾವುದೇ ರೀತಿಯ ಮುಂಚಿತ ಮಾತುಕತೆ ಅಥವಾ ಒಪ್ಪಂದಗಳನ್ನು ಮಾಡಿಕೊಂಡಿಲ್ಲ ಎಂದು ಖಚಿತಪಡಿಸಿದ್ದಾರೆ.
ಹೀಗೆ ಶೇಖ್ ಹಸೀನಾ ಅವರ ಈ ದಿಢೀರ್ ನಡೆ ಕೇವಲ ಭಾವನಾತ್ಮಕ, ಧಿಡೀರ್ ನಿರ್ಧಾರವಲ್ಲ, ಬದಲಿಗೆ ಇದೊಂದು ಅತ್ಯಂತ ಯೋಜಿತ ರಾಜಕೀಯ ತಂತ್ರಗಾರಿಕೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಪ್ರಸ್ತುತ ಬಾಂಗ್ಲಾದೇಶದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ದೇಶದ ಆರ್ಥಿಕ ಬಿಕ್ಕಟ್ಟು ಹಾಗೂ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರಲು ಹೆಣಗಾಡುತ್ತಿದ್ದು, ಸಾರ್ವಜನಿಕರಲ್ಲಿ ಮಧ್ಯಂತರ ಆಡಳಿತದ ವಿರುದ್ಧ ಅಸಮಾಧಾನದ ಹೊಗೆಯಾಡುತ್ತಿದೆ. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಹಸೀನಾ ದೇಶಕ್ಕೆ ಮರಳಿ ನ್ಯಾಯಾಲಯಕ್ಕೆ ಶರಣಾಗುವ ಮೂಲಕ ತಮ್ಮ ಮೇಲಿರುವ ಸಾವು ಹಾಗೂ ಜೈಲು ಶಿಕ್ಷೆಯ ಆದೇಶಗಳನ್ನು ಸಾರ್ವಜನಿಕ ಸಹಾನುಭೂತಿಯನ್ನಾಗಿ ಪರಿವರ್ತಿಸಲು ಬಯಸಿದ್ದಾರೆ. ಇದು ಅವರ ಸಾಂಪ್ರದಾಯಿಕ ಮತಬ್ಯಾಂಕ್ ಮತ್ತು ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬುವ ಸಾಧ್ಯತೆ ದಟ್ಟವಾಗಿದೆ ಎಂಬ ಲೆಕ್ಕಾಚಾರಗಳು ಕೇಳಿಬರುತ್ತಿವೆ.
ಹಸೀನಾ ಈ ಪ್ರಕಟಣೆ ಬಾಂಗ್ಲಾ ನೆರೆರಾಷ್ಟ್ರವಾದ ಭಾರತಕ್ಕೂ ಅತ್ಯಂತ ನಿರ್ಣಾಯಕವಾಗಿದೆ. ದೀರ್ಘಕಾಲದಿಂದ ನವದೆಹಲಿಯೊಂದಿಗೆ ಅತ್ಯುತ್ತಮ ರಾಜತಾಂತ್ರಿಕ ಸಂಬಂಧ ಹೊಂದಿದ್ದ ಹಸೀನಾ ಅವರಿಗೆ ಭಾರತ ಆಶ್ರಯ ನೀಡಿರುವುದು ಸದ್ಯದ ಢಾಕಾ ಸರ್ಕಾರದ ಕೆಂಗಣ್ಣಿಗೆ ಕಾರಣವಾಗಿದೆ. ಈಗ ಹಸೀನಾ ಅವರೇ ಸ್ವಯಂಪ್ರೇರಿತರಾಗಿ ಬಾಂಗ್ಲಾಕ್ಕೆ ಮರಳಿ ಕಾನೂನು ಎದುರಿಸಲು ಮುಂದಾಗಿರುವುದರಿಂದ, ಭಾರತದ ಮೇಲಿದ್ದ ರಾಜತಾಂತ್ರಿಕ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ. ಇದರೊಂದಿಗೆ, ಬಾಂಗ್ಲಾದೇಶದಲ್ಲಿ ಚೀನಾ ಮತ್ತು ಪಾಕಿಸ್ತಾನದ ಪ್ರಭಾವ ಹೆಚ್ಚಾಗುತ್ತಿರುವ ಪ್ರಸ್ತುತ ದಿನಗಳಲ್ಲಿ, ಹಸೀನಾ ಅವರ ಮರುಪ್ರವೇಶ ಅಲ್ಲಿನ ಆಂತರಿಕ ಸಮೀಕರಣಗಳನ್ನು ಬದಲಾಯಿಸಿ ಮತ್ತೊಮ್ಮೆ ಭಾರತದ ಪರ ಒಲವಿರುವ ಶಕ್ತಿಗಳು ಅಧಿಕಾರದ ಮುಂಚೂಣಿಗೆ ಬರಲು ವೇದಿಕೆ ಸೃಷ್ಟಿಸಬಹುದು.
ಹೀಗಾಗಿ ಸಾವು ಅಥವಾ ಸೆರೆವಾಸದ ಭೀತಿಯ ನಡುವೆಯೂ ಶೇಖ್ ಹಸೀನಾ ಕೈಗೊಂಡಿರುವ ಈ ರಾಜಕೀಯ ಜೂಜಾಟ ಮುಂಬರುವ ದಿನಗಳಲ್ಲಿ ಬಾಂಗ್ಲಾದೇಶವನ್ನು ಮತ್ತೊಂದು ದೊಡ್ಡ ಸಂಘರ್ಷದತ್ತ ದೂಡುವ ಸಾಧ್ಯತೆಯಿದೆ. ಒಂದು ವೇಳೆ ಡಿಸೆಂಬರ್‌ನಲ್ಲಿ ಅವರು ತಮ್ಮ ದೇಶಕ್ಕೆ ಕಾಲಿಟ್ಟರೆ, ಅವರ ಬೆಂಬಲಿಗರು ಮತ್ತು ಪ್ರಸ್ತುತ ಸರ್ಕಾರದ ನಡುವೆ ಬೀದಿ ಹೋರಾಟಗಳು ತೀವ್ರಗೊಳ್ಳಬಹುದು. ಇದು ಕೇವಲ ಒಂದು ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿರದೆ, ಇಡೀ ದಕ್ಷಿಣ ಏಷ್ಯಾದ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರುವ ಶಕ್ತಿಯನ್ನು ಹೊಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಸೀನಾ ಅವರ ಈ ಆಟ ಬಾಂಗ್ಲಾ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸುವುದಂತೂ ಸತ್ಯ.



