POK : ಪಾಕ್ ಆಕ್ರಮಿತ ಕಾಶ್ಮೀರ ನಮಗೆ ಹಸ್ತಾಂತರ ಆಗಬೇಕು – ಭಾರತದ ಚೆಕ್ ಮೇಟ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಸಭೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಕಾಶ್ಮೀರದ ವಿಷಯವನ್ನು ಅನಗತ್ಯವಾಗಿ ಪ್ರಸ್ತಾಪಿಸಿ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯಲು ಪ್ರಯತ್ನಿಸಿದೆ. ಇದಕ್ಕೆ ತಕ್ಷಣವೇ ಕೌಂಟರ್ ನೀಡಿದ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್, ಪ್ರತ್ಯುತ್ತರ ನೀಡುವ ಹಕ್ಕನ್ನು ಬಳಸಿ ಪಾಕಿಸ್ತಾನವನ್ನು ತೀವ್ರ ತರಾಟೆ ತೆಗೆದುಕೊಂಡರು. ಜಮ್ಮು ಮತ್ತು ಕಾಶ್ಮೀರ ಭಾರತೀಯ ಸಂವಿಧಾನಾತ್ಮಕ ಚೌಕಟ್ಟಿನಡಿಯಲ್ಲಿ ಸದಾ ದೇಶದ ಅವಿಭಾಜ್ಯ ಭಾಗವಾಗಿಯೇ ಇರಲಿದೆ, ಪಾಕಿಸ್ತಾನ ಇತರರ ಮೇಲೆ ಅಪಪ್ರಚಾರ ಮಾಡುವ ಬದಲು ತನ್ನ ಆಂತರಿಕ ಬಿಕ್ಕಟ್ಟುಗಳನ್ನು ಸರಿಪಡಿಸಿಕೊಳ್ಳುವುದು ಒಳಿತು ಎಂದು ಬಿಸಿ ಮುಟ್ಟಿಸಿದ್ದಾರೆ.

ಈ ಸಭೆಯಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ ಪರ್ವತನೇನಿ ಹರೀಶ್, ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಇತ್ಯರ್ಥವಾಗಬೇಕಿರುವುದು ಪಾಕಿಸ್ತಾನದಿಂದ ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶದ (ಪಿಒಕೆ) ತೆರವು ಮಾತ್ರ. ಭಾರತದ ಭೂಭಾಗವನ್ನು ತಕ್ಷಣವೇ ಖಾಲಿ ಮಾಡಿ ಒಪ್ಪಿಸುವುದೇ ನಿಜವಾದ ಪರಿಹಾರವೆಂದು ಒತ್ತಿಹೇಳಿದರು. ಇದರೊಂದಿಗೆ ಸಿಂಧು ಜಲ ಒಪ್ಪಂದದ ವಿಚಾರವನ್ನು ಪ್ರಸ್ತಾಪಿಸಿದ ಭಾರತ, ಗಡಿಪಾರಿನ ಭಯೋತ್ಪಾದನೆಯನ್ನೇ ಸರ್ಕಾರಿ ನೀತಿಯನ್ನಾಗಿ ಇಟ್ಟುಕೊಂಡಿರುವ ರಾಷ್ಟ್ರದೊಂದಿಗೆ ಯಾವುದೇ ರೀತಿಯ ಸೌಹಾರ್ದ ಹಾಗೂ ನಂಬಿಕೆಯ ಒಪ್ಪಂದಗಳು ನಿರೀಕ್ಷಿತ ಮಟ್ಟದಲ್ಲಿ ಸಾಗಲು ಸಾಧ್ಯವಿಲ್ಲ ಎಂದು ಜಗತ್ತಿನೆದುರು ಪಾಕಿಸ್ತಾನದ ನೈಜ ಮುಖವಾಡವನ್ನು ಬಯಲುಮಾಡಿದೆ.

ವಿಶ್ವಸಂಸ್ಥೆಯ ವೇದಿಕೆಯಲ್ಲಿ ಭಾರತ ಪ್ರದರ್ಶಿಸುತ್ತಿರುವ ಈ ಆಕ್ರಮಣಕಾರಿ ರಾಜತಾಂತ್ರಿಕತೆ ಜಾಗತಿಕ ಮಟ್ಟದಲ್ಲಿ ತಾನಿಂದು ಹೊಂದಿರುವ ಪ್ರಭಾವಶಾಲಿ ಸ್ಥಾನಮಾನವನ್ನು ತೋರಿಸುತ್ತದೆ. ಈ ಹಿಂದೆ ಪಾಕಿಸ್ತಾನದ ಅಪಪ್ರಚಾರಗಳಿಗೆ ಬರೀ ರಕ್ಷಣಾತ್ಮಕವಾಗಿ ಉತ್ತರಿಸುತ್ತಿದ್ದ ಭಾರತ, ಈಗ ಪಿಒಕೆ ತೆರವು ಹಾಗೂ ಗಡಿಪಾರಿನ ಭಯೋತ್ಪಾದನೆಯ ಸತ್ಯಾಂಶವನ್ನು ಜಾಗತಿಕ ಚರ್ಚೆಯ ಕೇಂದ್ರಬಿಂದುವನ್ನಾಗಿ ಮಾಡುತ್ತಿದೆ. ಪಾಕಿಸ್ತಾನದಲ್ಲಿ ತೀವ್ರ ಆರ್ಥಿಕ ಕುಸಿತ, ರಾಜಕೀಯ ಅಸ್ಥಿರತೆ ಮತ್ತು ಬಲೂಚಿಸ್ತಾನದಂತಹ ಆಂತರಿಕ ದಂಗೆಗಳು ಹೆಚ್ಚುತ್ತಿರುವಾಗ, ಅಲ್ಲಿನ ಸರ್ಕಾರ ಹಾಗೂ ಸೇನೆ ಜನರ ಗಮನ ಬೇರೆಡೆ ಸೆಳೆಯಲು ಕಾಶ್ಮೀರ ವಿಷಯವನ್ನು ಪದೇ ಪದೇ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಮತ್ತೊಂದೆಡೆ, ಸಿಂಧು ಜಲ ಒಪ್ಪಂದದ ಕುರಿತು ಭಾರತ ನೀಡಿರುವ ಕಠಿಣ ಮುನ್ನೆಚ್ಚರಿಕೆ ರಾಜತಾಂತ್ರಿಕ ಕಾರ್ಯತಂತ್ರದಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ. ಭಯೋತ್ಪಾದನೆ ಮತ್ತು ಮಾತುಕತೆ ಅಥವಾ ಒಪ್ಪಂದಗಳು ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂಬ ನಿಲುವಿಗೆ ನವದೆಹಲಿ ಬದ್ಧವಾಗಿದೆ. ಭದ್ರತಾ ಮಂಡಳಿಯಲ್ಲಿ ಭಾರತ ಪಿಒಕೆ ವಾಪಸಾತಿಯನ್ನು ನೇರವಾಗಿ ಪ್ರತಿಪಾದಿಸುತ್ತಿರುವುದು ಭವಿಷ್ಯದಲ್ಲಿ ಭಾರತದ ಗಡಿ ನೀತಿ ಮತ್ತಷ್ಟು ಬಿಗಿಯಾಗಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಪಾಕಿಸ್ತಾನ ತನ್ನ ಆಂತರಿಕ ಜಗಳವನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡಲು ಯತ್ನಿಸುವ ತಂತ್ರ ಈಗ ಸಂಪೂರ್ಣವಾಗಿ ವಿಫಲವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಅದರ ರಾಜತಾಂತ್ರಿಕ ಪ್ರತ್ಯೇಕತೆ ಹೆಚ್ಚುತ್ತಿದೆ.