DK SHIVAKUMAR: ಚೆನ್ನಮ್ಮ ಅಂತ್ಯಕ್ರಿಯೆಗೆ ಸರ್ಕಾರಿ ಗೌರವ – ದೊಡ್ಡಗೌಡರ ಪಾದ ಮುಟ್ಟಿ ಸಂತೈಸಿದ ಡಿಕೆ

ಹಾಸನದ ಹೊಳೆನರಸೀಪುರ ಸಮೀಪವಿರುವ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರ ಸಹಧರ್ಮಿಣಿ ಚೆನ್ನಮ್ಮ ಅವರ ಅಂತಿಮ ಸಂಸ್ಕಾರ ಕಾರ್ಯಗಳು ರಾಜ್ಯ ಸರ್ಕಾರದ ಪೂರ್ಣ ಗೌರವಗಳೊಂದಿಗೆ ನೆರವೇರಿದವು. ಈ ಸಂದರ್ಭದಲ್ಲಿ ಹಿರಿಯ ನಾಯಕ ದೇವೇಗೌಡರು ಮತ್ತು ಅವರ ಪುತ್ರ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಭಾರತದ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸುವ ಮೂಲಕ ಸರ್ಕಾರ ತನ್ನ ಅಂತಿಮ ನಮನ ಸಲ್ಲಿಸಿತು.
ಈ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಸಾಮಾಜಿಕ ಮಾಧ್ಯಮದ ಮುಖಾಂತರ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ಜೀವಿ ಚೆನ್ನಮ್ಮ ಅವರ ಅಗಲಿಕೆ ದೇವೇಗೌಡರ ಪರಿವಾರಕ್ಕೆ ಚೇತರಿಸಿಕೊಳ್ಳಲಾಗದಷ್ಟು ದೊಡ್ಡ ಆಘಾತ ತಂದಿದೆ ಎಂದಿರುವ ಅವರು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ಆಘಾತವನ್ನು ತಡೆಯುವ ಧೈರ್ಯವನ್ನು ದೇವೇಗೌಡರ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರ ಸುದೀರ್ಘ ರಾಜಕೀಯ ಜೀವನದಲ್ಲಿ ಮೌನ ಶಕ್ತಿಯಾಗಿ, ಹಿನ್ನೆಲೆಯಲ್ಲಿ ಬೆನ್ನೆಲುಬಾಗಿ ನಿಂತಿದ್ದ ಚೆನ್ನಮ್ಮ ಅವರ ನಿರ್ಗಮನ ಗೌಡರ ದೊಡ್ಡ ಕುಟುಂಬಕ್ಕೆ ಕೇವಲ ವೈಯಕ್ತಿಕ ನಷ್ಟವಷ್ಟೇ ಅಲ್ಲ, ಒಂದು ಭಾವನಾತ್ಮಕ ಯುಗದ ಅಂತ್ಯವಾಗಿದೆ. ರಾಜಕೀಯ ಏಳುಬೀಳುಗಳ ನಡುವೆ ಇಡೀ ಕುಟುಂಬವನ್ನು ಬೆಸೆದಿಟ್ಟಿದ್ದ ಹಿರಿಯ ಜೀವಿಯ ಅಗಲಿಕೆ, ಹಿರಿಯ ಜೀವ ದೇವೇಗೌಡರು ಹಾಗೂ ಕುಮಾರಸ್ವಾಮಿ ಸೇರಿದಂತೆ ರೇವಣ್ಣ ಅವರಿಗೆ ದೊಡ್ಡ ಶೂನ್ಯ ಆವರಿಸಿದಂತೆ ಭಾಸವಾಗಿದೆ.

ಇನ್ನೊಂದೆಡೆ, ತೀವ್ರ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತೋರಿದ ಸೌಹಾರ್ದತೆ ಮತ್ತು ಗೌರವ ಕರ್ನಾಟಕದ ಪ್ರಬುದ್ಧ ರಾಜಕೀಯ ಸಂಸ್ಕೃತಿಗೆ ಕನ್ನಡಿ ಹಿಡಿದಿದೆ. ಹಳೆಯ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಮೇಲಾಟ ಹಾಗೂ ಕಾಂಗ್ರೇಸ್-ಜೆಡಿಎಸ್ ನಡುವಿನ ತೀವ್ರ ಪೈಪೋಟಿಯ ನಡುವೆಯೂ, ಇಂತಹ ದುಃಖದ ಸಂದರ್ಭದಲ್ಲಿ ನಾಯಕರು ಪಕ್ಷಾತೀತವಾಗಿ ಒಗ್ಗಟ್ಟು ಹಾಗೂ ಪರಸ್ಪರ ಗೌರವ ಪ್ರದರ್ಶಿಸುವುದು ರಾಜ್ಯದ ರಾಜಕೀಯ ಪರಿಪಕ್ವತೆಯನ್ನು ಎತ್ತಿಹಿಡಿಯುತ್ತದೆ.