PRAJWAL REVANNA : ಕೆಲಸಕ್ಕೆ ಕರೀಬೇಡಿ..ಊಟಕ್ಕೆ ಮರಿಬೇಡಿ – ಜೈಲಲ್ಲಿ ಪ್ರಜ್ವಲ್ & ವಿನಯ್ ಕೆಲಸದ ಕಳ್ಳಾಟ !

ಲೈಂಗಿಕ ದೌರ್ಜನ್ಯ, ಅತ್ಯಾಚಾರದ ಪ್ರಕರಣದಲ್ಲಿ ಅಪರಾಧಿಯಾಗಿ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟಿನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ತಮಗೆ ವಹಿಸಲಾಗಿದ್ದ ದಿನಗೂಲಿ ಕೆಲಸದಿಂದ ಸಂಪೂರ್ಣವಾಗಿ ದೂರವುಳಿದಿದ್ದಾರೆ. ಆರಂಭದಲ್ಲಿ ಸ್ವಯಂ ಪ್ರೇರಿತರಾಗಿ ಕಾರಾಗೃಹದ ವಾಚನಾಲಯದ ಮೇಲ್ವಿಚಾರಣೆಯ ನೆರವು ನೀಡುವ ಕಾಯಕವನ್ನು ಆಯ್ದುಕೊಂಡು ದಿನಕ್ಕೆ ಐನೂರಕ್ಕೂ ಹೆಚ್ಚು ರೂಪಾಯಿ ಗಳಿಕೆಗೆ ಮುಂದಾಗಿದ್ದ ಇವರು, ಇತ್ತೀಚಿನ ದಿನಗಳಲ್ಲಿ ಅತ್ತ ಸುಳಿಯುತ್ತಿಲ್ಲ ಎಂದು ತಿಳಿದುಬಂದಿದೆ.

ನ್ಯಾಯಾಲಯದಲ್ಲಿ ಬಾಕಿ ಇರುವ ಇತರ ಪ್ರಕರಣಗಳ ವಿಚಾರಣೆಗಳ ನೆಪವೊಡ್ಡಿ ಕರ್ತವ್ಯದಿಂದ ವಿನಾಯಿತಿ ಪಡೆಯುತ್ತಿರುವ ಇವರು, ಕೇವಲ ದಿನಪತ್ರಿಕೆ ಓದು ಹಾಗೂ ಆಧ್ಯಾತ್ಮಿಕ ಚಿಂತನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಯಾವುದೇ ಕೆಲಸಕ್ಕೆ ಹಾಜರಾಗದೆ, ಕೇವಲ ತಿಂಡಿ ಮತ್ತು ಊಟದ ಸಮಯದಲ್ಲಿ ಮಾತ್ರ ಹೊರಗೆ ಕಾಣಿಸಿಕೊಳ್ಳುತ್ತಾರೆ ಎಂಬ ಮಾಹಿತಿ ಜೈಲಿನ ಮೂಲಗಳಿಂದ ಲಭ್ಯವಾಗಿದೆ.ಇವರೊಂದಿಗೆ ಅದೇ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಕೂಡ ತಮ್ಮ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿರುವ ಕಾರಣಕ್ಕೆ ಯಾವುದೇ ದುಡಿಮೆಗೆ ಕೈಹಾಕಿಲ್ಲ.

ರಾಜಕೀಯ ಹಿನ್ನೆಲೆಯುಳ್ಳ ಪ್ರಭಾವಿ ವ್ಯಕ್ತಿಗಳು ಜೈಲು ಸೇರಿದ ಮೇಲೂ ತಮ್ಮ ಹಳೆಯ ಪ್ರತಿಷ್ಠೆ ಮತ್ತು ವಿವಿಐಪಿ ಧೋರಣೆಯನ್ನು ಬಿಟ್ಟುಕೊಡುವುದಿಲ್ಲ ಎಂಬುದಕ್ಕೆ ಈ ನಡವಳಿಕೆ ಸಾಕ್ಷಿಯಾಗಿದೆ. ಸಾಮಾನ್ಯ ಕೈದಿಗಳಿಗೆ ಕಡ್ಡಾಯವಾಗಿರುವ ಕೆಲವು ನಿಯಮಗಳು ಮತ್ತು ನಿಗದಿತ ಕೆಲಸಗಳು ಇಂತಹ ರಾಜಕಾರಣಿಗಳಿಗೆ ಬರುವಷ್ಟರಲ್ಲಿ ಸಡಿಲಗೊಳ್ಳುತ್ತವೆ ಎಂಬ ಜನರ ಆಕ್ಷೇಪಕ್ಕೆ ಇದು ಮತ್ತಷ್ಟು ಪುಷ್ಟಿ ನೀಡುತ್ತದೆ. ಅಧಿಕಾರದಲ್ಲಿದ್ದಾಗ ಅನುಭವಿಸಿದ ಐಷಾರಾಮಿ ಜೀವನದ ಕಾರಣದಿಂದಾಗಿ ಜೈಲಿನ ಕಠಿಣ ಪರಿಸರದಲ್ಲಿ ದೈಹಿಕ ಅಥವಾ ಬೌದ್ಧಿಕ ಶ್ರಮ ವಹಿಸಲು ಇವರ ಅಹಂ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಮತ್ತೊಂದೆಡೆ, ಜೈಲಿನ ಆಡಳಿತ ಮಂಡಳಿ ಇಂತಹ ಗಣ್ಯ ಕೈದಿಗಳ ವಿಷಯದಲ್ಲಿ ತೋರುವ ಮೃದು ಧೋರಣೆ ವ್ಯವಸ್ಥೆಯ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ. ಕೋರ್ಟ್ ವಿಚಾರಣೆಯ ನೆಪಗಳನ್ನು ಸುಲಭವಾಗಿ ಅಂಗೀಕರಿಸುವ ಅಧಿಕಾರಿಗಳು, ಇವರ ಮೇಲೆ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಲು ಹಿಂಜರಿಯುತ್ತಾರೆ. ನಿಯಮಗಳ ಪ್ರಕಾರ ಶ್ರಮದಾನ ಮಾಡದಿದ್ದರೆ ಸನ್ನಡತೆಯ ಆಧಾರದ ಮೇಲೆ ಸಿಗುವ ಅವಧಿಪೂರ್ವ ಬಿಡುಗಡೆಯ ಸೌಲಭ್ಯ ಕೈತಪ್ಪುತ್ತದೆ ಎಂದು ಹೇಳಲಾಗುತ್ತಿದ್ದರೂ, ಸದ್ಯಕ್ಕೆ ಅಂತಹ ಯಾವುದೇ ಹಪಹಪಿ ಈ ನಾಯಕರಲ್ಲಿ ಕಾಣಿಸುತ್ತಿಲ್ಲ.

ಈ ಬೆಳವಣುಗೆಗಳು ಕಾನೂನು ಎಲ್ಲರಿಗೂ ಒಂದೇ ಎಂಬ ಆಶಯವನ್ನು ಅಣಕಿಸುವಂತಿದೆ.
ಹಾಸನ ಭಾಗದಲ್ಲಿ ಅರಸು ಮನೆತನದಂತೆ ಮೆರೆದ ಜೆಡಿಎಸ್ ಕುಟುಂಬದ ಕುಡಿಗೆ ಈ ರೀತಿ ಜೈಲುಪಾಲಾಗಿರುವುದು ಈಗಾಗಲೇ ಪ್ರಾದೇಶಿಕ ಪಕ್ಷಕ್ಕೆ ದೊಡ್ಡ ಹಿನ್ನಡೆ ತಂದಿದೆ. ಈಗ ಜೈಲಿನ ಒಳಗೂ ನಿಯಮ ಪಾಲಿಸದ ವರದಿಗಳು ಹೊರಬರುತ್ತಿರುವುದು ಪಕ್ಷದ ನೈತಿಕತೆಗೆ ಮತ್ತಷ್ಟು ಧಕ್ಕೆ ತರಲಿವೆ.