HIGHCOURT : ಯೋಗೇಶ್ ಗೌಡ ಕೊಲೆ ಪ್ರಕರಣ – ಜೀವಾವಧಿ ಶಿಕ್ಷೆಯಿಂದ ವಿನಯ್ ಕುಲಕರ್ಣಿಗೆ ಸಿಗುತ್ತಾ ಮುಕ್ತಿ ..?

ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಬಿಜೆಪಿ ಮುಖಂಡ ಯೋಗೇಶ್ ಗೌಡ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ರದ್ದು ಕೋರಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಮಹತ್ವದ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ತನ್ನ ಅಂತಿಮ ಆದೇಶವನ್ನು ಕಾಯ್ದಿರಿಸಿದೆ. ಈ ಹಿಂದೆ ವಿಶೇಷ ಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಅಥವಾ ರದ್ದುಪಡಿಸಿ ಜಾಮೀನು ನೀಡಬೇಕು ಎಂದು ಕುಲಕರ್ಣಿ ಪರ ವಕೀಲರು ವಾದಿಸಿದ್ದಾರೆ. ಇದಕ್ಕೆ ಪ್ರತಿವಾದ ಮಂಡಿಸಿದ ಸಿಬಿಐ ಪರ ವಕೀಲರು ಪ್ರಕರಣದ ಗಂಭೀರತೆ ಮತ್ತು ತನಿಖಾ ಹಂತದ ಸೂಕ್ಷ್ಮತೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಕಳೆದ ಹಲವು ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಈ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸರಿಂದ ಸಿಬಿಐಗೆ ವಹಿಸಿದ ನಂತರ ಕಾನೂನು ಪ್ರಕ್ರಿಯೆಗಳು ತೀವ್ರಗೊಂಡಿದ್ದವು. ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ನಿರ್ದೇಶನಗಳ ಅನ್ವಯ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಚುರುಕುಗೊಳಿಸಿ ಶಾಸಕ ವಿನಯ್ ಕುಲಕರ್ಣಿ ಅವರನ್ನು ಅಪರಾಧಿ ಎಂದು ಘೋಷಿಸಿದ್ದು, ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಈ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಹಾಕಲಾಗಿತ್ತು. ಆದ್ರೆ ಈ ಪ್ರಕರಣದಲ್ಲಿ ಶಾಸಕ ಕುಲಕರ್ಣಿ ಭಾಗವಹಿಸಿವಿಕೆ, ಅಧಿಕಾರ ದುರುಪಯೋಗ, ಕೊಲೆಗೆ ನೆರವು ನೀಡಿರುವುದನ್ನು ಸಿಬಿಐ ಪರ ವಕೀಲರು ಕೋರ್ಟ್ ಗಮನಕ್ಕೆ ತಂದು ಪ್ರಬಲ ವಾದ ಮಂಡಿಸಿದ್ದಾರೆ.
ಹೀಗೆ ಸುದೀರ್ಘ ವಾದ-ಪ್ರತಿವಾದಗಳನ್ನು ದಾಖಲಿಸಿಕೊಂಡು ತನ್ನ ತೀರ್ಪನ್ನು ಪ್ರಕಟಿಸುವುದಾಗಿ ತಿಳಿಸಿದೆ.

ಈ ಕಾನೂನು ಹೋರಾಟ ಕೇವಲ ಒಬ್ಬ ವ್ಯಕ್ತಿಯ ಅಪರಾಧ ಪ್ರಕರಣವಾಗಿ ಉಳಿದಿಲ್ಲ, ಬದಲಿಗೆ ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರ ರಾಜಕೀಯ ಭವಿಷ್ಯದ ನಿರ್ಣಾಯಕ ಅಂಶವಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತನ್ನ ಪ್ರಮುಖ ಶಾಸಕರೊಬ್ಬರು ಇಂತಹ ಗಂಭೀರ ಕೊಲೆ ಪ್ರಕರಣದ ಕಾನೂನು ಸುಳಿಗೆ ಸಿಲುಕಿರುವುದು ಮುಜುಗರ ತಂದಿಟ್ಟರೆ, ವಿರೋಧ ಪಕ್ಷವಾದ ಬಿಜೆಪಿಗೆ ತನ್ನ ನಿಷ್ಠಾವಂತ ಕಾರ್ಯಕರ್ತನ ಹತ್ಯೆಗೆ ನ್ಯಾಯ ಸಿಗಬೇಕೆಂಬ ಭಾವನಾತ್ಮಕ ಮತ್ತು ರಾಜಕೀಯ ಅಸ್ತ್ರ ಸಿಕ್ಕಂತಾಗಿದೆ. ತಳಮಟ್ಟದಲ್ಲಿ ಎರಡು ಪ್ರಮುಖ ಪಕ್ಷಗಳ ನಡುವಿನ ಸದ್ಧಾಂತಿಕ ಮತ್ತು ಸಾಂಪ್ರದಾಯಿಕ ವೈಷಮ್ಯವನ್ನು ಈ ಪ್ರಕರಣ ನಿರಂತರವಾಗಿ ಜೀವಂತವಾಗಿರಿಸಿದೆ.

ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆಯ ಆರೋಪಗಳು ಮತ್ತು ನ್ಯಾಯಾಂಗದ ನಿಷ್ಪಕ್ಷಪಾತ ನಿಲುವುಗಳ ನಡುವಿನ ಸಂಘರ್ಷವಾಗಿ ಸಾರ್ವಜನಿಕ ವಲಯದಲ್ಲಿ ಇದು ಬಿಂಬಿತವಾಗುತ್ತಿದೆ. ಹೈಕೋರ್ಟ್ ನೀಡಲಿರುವ ಮುಂಬರುವ ತೀರ್ಪು ನಿರ್ಣಾಯಕವಾಗಿದ್ದು, ಕಾಂಗ್ರೆಸ್ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ನ್ಯಾಯಾಂಗದ ಆದೇಶ ಕೇವಲ ಕಾನೂನಿನ ಗೆಲುವನ್ನಷ್ಟೇ ನಿರ್ಧರಿಸದೆ, ಉತ್ತರ ಕರ್ನಾಟಕದ ಮುಂದಿನ ರಾಜಕೀಯ ಸಮೀಕರಣಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಶಕ್ತಿಯನ್ನು ಹೊಂದಿದೆ.