BIDADI TOWNSHIP: ಭೈರಮಂಗಲದಲ್ಲಿ ರಾಜಕೀಯ ಹೈಡ್ರಾಮಾ – ಅಭಿವೃದ್ಧಿ ವರ್ಸಸ್ ಅನ್ನದಾತರ ಆಕ್ರೋಶ

ರಾಮನಗರ ಜಿಲ್ಲೆಯ ಬಿಡದಿ ಸಮಗ್ರ ಕೈಗಾರಿಕಾ ಟೌನ್‌ಶಿಪ್ (GBIT) ಯೋಜನೆಗೆ ಸಂಬಂಧಿಸಿದಂತೆ ಭೈರಮಂಗಲ ಭಾಗದ ಕೆಲ ಕೃಷಿಕರು ಈಗ ನೇರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧದ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಹಿಂದೆ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಭಾಗದ ಫಲವತ್ತಾದ ಕೃಷಿ ಭೂಮಿಯನ್ನು “ರೆಡ್ ಜೋನ್” ಎಂದು ಘೋಷಿಸಿದ್ದನ್ನು ತೀವ್ರವಾಗಿ ರೈತರು ಖಂಡಿಸಿದ್ದಾರೆ.

ರೈತರ ವಾದದ ಪ್ರಕಾರ, ಅಂದು ಜೆಡಿಎಸ್ ಆಡಳಿತಾವಧಿಯಲ್ಲಿ ಜಮೀನುಗಳನ್ನು ರೆಡ್ ಜೋನ್ ವ್ಯಾಪ್ತಿಗೆ ತಂದಿದ್ದರಿಂದಲೇ ಇಂದು ಕೃಷಿಕರು ತಮ್ಮ ಸ್ವಂತ ಭೂಮಿಯನ್ನು ಮಾರಾಟ ಮಾಡಲಾಗದೆ, ಯಾವುದೇ ಅಭಿವೃದ್ಧಿಪಡಿಸಲಾಗದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಂದು ಬಿಡದಿ ಟೌನ್‌ಶಿಪ್ ಯೋಜನೆಗೆ ತಳಹದಿ ಹಾಕಿ, ಇಂದು ರಾಜಕೀಯ ಲಾಭಕ್ಕಾಗಿ ಕಣ್ಣೀರು ಸುರಿಸುತ್ತಾ ಕುಮಾರಸ್ವಾಮಿ ರೈತರ ಪರ ನಾಟಕವಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕುಮಾರಸ್ವಾಮಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮರುಉತ್ತರ ನೀಡಿರುವ ಹೆಚ್.ಡಿ. ಕುಮಾರಸ್ವಾಮಿ, ತಾವು ಅಂದು ಭೂ ಮಾಫಿಯಾದಿಂದ ಕೃಷಿ ಜಮೀನನ್ನು ರಕ್ಷಿಸಲು ಈ ವಲಯ ಗುರುತಿಸಿದ್ದೇವೆಯೇ ಹೊರತು ರೈತರನ್ನು ಒಕ್ಕಲೆಬ್ಬಿಸಲು ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿ ವೇದಿಕೆಯ ಮೇಲೆ ಖಾಲಿ ಕುರ್ಚಿಯನ್ನಿಟ್ಟು ರಾಜಕೀಯ ವಾಗ್ದಾಳಿ ನಡೆಸಿದ್ದರು.

ರಾಮನಗರ ಮತ್ತು ಕನಕಪುರ ಭಾಗದಲ್ಲಿ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ನಡುವಿನ ಹಳೆ ರಾಜಕೀಯ ವೈಷಮ್ಯಕ್ಕೆ ಈಗ ಬಿಡದಿ ರೈತರ ಹೋರಾಟ ಹೊಸ ಅಸ್ತ್ರವಾಗಿ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರ ಇದನ್ನು ಕುಮಾರಸ್ವಾಮಿ ಅವರದ್ದೇ “ಡ್ರೀಮ್ ಪ್ರಾಜೆಕ್ಟ್” ಎಂದು ಬಿಂಬಿಸಿ ಅವರನ್ನು ಕಟುವಕಟೆಗೆ ನಿಲ್ಲಿಸಲು ಯತ್ನಿಸುತ್ತಿದ್ದರೆ, ಜೆಡಿಎಸ್ ಇದನ್ನು ರೈತರ ನೈಜ ಆಕ್ರೋಶ ಮತ್ತು ಸರ್ಕಾರದ ಭೂ ಕಸಿತ ತಂತ್ರ ಎಂದು ತಿರುಗೇಟು ನೀಡುತ್ತಿದೆ. ಆದರೆ, ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಕೃಷಿಕರು ಈಗ ಕೇವಲ ಸರ್ಕಾರದ ವಿರುದ್ಧವಷ್ಟೇ ಅಲ್ಲದೆ, ತಮಗೆ ಈ ಪರಿಸ್ಥಿತಿ ಬರಲು ಕಾರಣರಾದ ಪ್ರಾದೇಶಿಕ ಪಕ್ಷದ ನಾಯಕರ ವಿರುದ್ಧವೂ ತಿರುಗಿಬಿದ್ದಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಆಧಾರಿತ ಹೈಟೆಕ್ ಉಪನಗರ ನಿರ್ಮಾಣದ ಹೆಸರಿನಲ್ಲಿ 7,000 ಕ್ಕೂ ಹೆಚ್ಚು ಎಕರೆ ತೋಟಗಾರಿಕಾ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟಿರುವುದು ಅಭಿವೃದ್ಧಿಯ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಒಂದು ಕಡೆ ಸಚಿವ ಸಂಪುಟದ ವಿಸ್ತರಣೆ ಮತ್ತು ರಾಜಕೀಯ ಸಮೀಕರಣಗಳಲ್ಲಿ ನಿರತರಾಗಿರುವ ಕಾಂಗ್ರೆಸ್ ನಾಯಕರು, ಕೃಷಿಕರ ಮನವೊಲಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಮತ್ತೊಂದೆಡೆ, ವಿರೋಧ ಪಕ್ಷಗಳು ಈ ಬಿಕ್ಕಟ್ಟನ್ನು ಬೀದಿಯಲ್ಲಿ ಚರ್ಚಿಸಲು ಬಯಸುತ್ತಿವೆಯೇ ಹೊರತು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿಲ್ಲ. ರಾಜಕೀಯ ಪಕ್ಷಗಳ ಈ ಪರಸ್ಪರ ಬೊಟ್ಟು ಮಾಡುವ ತಂತ್ರಗಾರಿಕೆಯಿಂದಾಗಿ, ನಿಜವಾದ ಅನ್ನದಾತರು ತಮ್ಮ ಭವಿಷ್ಯದ ಭದ್ರತೆ ಮತ್ತು ಜೀವನೋಪಾಯವನ್ನು ಕಳೆದುಕೊಳ್ಳುವ ಭೀತಿಯಲ್ಲಿ ಹೋರಾಟದ ಹಾದಿ ಹಿಡಿಯುವಂತಾಗಿದೆ.