ಕರ್ನಾಟಕ ವಿಧಾನಪರಿಷತ್ತಿನ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಆಡಳಿತ ಪಕ್ಷವಾದ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ. ಒಟ್ಟು ಏಳು ಸ್ಥಾನಗಳಿಗೆ ನಡೆದ ಈ ಸ್ಪರ್ಧೆಯಲ್ಲಿ ಕಾಂಗ್ರೆಸ್ ತನ್ನ ಐದೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ತೀವ್ರ ಮುಖಭಂಗವಾಗಿದ್ದು, ಜಂಟಿಯಾಗಿ ಕಣಕ್ಕಿಳಿಸಿದ್ದ ಮೂವರು ಅಭ್ಯರ್ಥಿಗಳಲ್ಲಿ ಒಬ್ಬರು ಪರಾಭವಗೊಂಡಿದ್ದಾರೆ. ತೀವ್ರ ಪೈಪೋಟಿಗೆ ಕಾರಣವಾಗಿದ್ದ ಏಳನೇ ಸ್ಥಾನದ ಹೋರಾಟದಲ್ಲಿ ಜೆಡಿಎಸ್ನ ಗೋವಿಂದರಾಜು ಅವರು ಕಾಂಗ್ರೆಸ್ನ ವಿನಯ್ ಕಾರ್ತಿಕ್ ಎದುರು ಸೋಲು ಅನುಭವಿಸಿದ್ದಾರೆ.
ಈ ಬಾರಿಯ ಮೇಲ್ಮನೆ ಚುನಾವಣೆಯಲ್ಲಿ ಅತ್ಯಂತ ಚರ್ಚಾಸ್ಪದ ವಿಷಯವೆಂದರೆ ಶಾಸಕರ ವಲಯದಲ್ಲಿ ನಡೆದಿದೆ ಎನ್ನಲಾದ ಕ್ರಾಸ್ ವೋಟಿಂಗ್ . ಚುನಾವಣೆಯ ಆಂತರಿಕ ಲೆಕ್ಕಾಚಾರಗಳ ಪ್ರಕಾರ, ಪ್ರತಿಪಕ್ಷಗಳ ಮೈತ್ರಿಕೂಟದ ಕೆಲವು ಶಾಸಕರು ತಮ್ಮದೇ ಪಕ್ಷದ ನಿರ್ದೇಶನವನ್ನು ಮೀರಿ ಆಡಳಿತರೂಢ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಗುಪ್ತ ರಾಜಕೀಯ ತಂತ್ರಗಾರಿಕೆಯೇ ಜೆಡಿಎಸ್ ಅಭ್ಯರ್ಥಿಯ ಪರಾಜಯಕ್ಕೆ ಹಾಗೂ ಕಾಂಗ್ರೆಸ್ನ ಐದನೇ ಅಭ್ಯರ್ಥಿಯ ಅನಿರೀಕ್ಷಿತ ಗೆಲುವಿಗೆ ಪ್ರಮುಖ ಕಾರಣವಾಗಿದೆ.
ಕಾಂಗ್ರೆಸ್ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಗೆ 32 ಮತಗಳು, ತಿಪ್ಪಣ್ಣಪ್ಪ ಕಮಕನೂರು 30 ಮತಗಳು,
ಮಳವಳ್ಳಿ ಶಿವಣ್ಣ 30 ಮತಗಳು, ಪಿ.ವಿ. ಮೋಹನ್ 29 ಮತಗಳು ಗಳಿಸಿದ್ರೆ, ಬಿಜೆಪಿಯ ರಘು ಕೌಟಿಲ್ಯ 29 ಮತಗಳು, ಲಿಂಗರಾಜು ಪಾಟೀಲ್ 27 ಮತಗಳು ಮತ್ತು ಕಾಂಗ್ರೆಸ್ ನ ಬಿ.ಕೆ. ಹರಿಪ್ರಸಾದ್ ಪ್ರಥಮ ಪ್ರಾಶಸ್ಯದ ಮತಗಳ ಆಧಾರದ ಮೇಲೆ ವಿಜೇತರಾಗಿದ್ದಾರೆ. ಆದ್ರೆ ಜೆಡಿಎಸ್ ನ ಗೋವಿಂದರಾಜು 14 ಮತ ಮಾತ್ರ ಪಡೆದುಕೊಂಡಿದ್ದಾರೆ.
ಮೊದಲ ಪ್ರಾಶಸ್ಯದ ಮತಗಳ ಎಣಿಕೆಯಲ್ಲೇ ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ವಿನಯ್ ಕಾರ್ತಿಕ್, ಪಿ.ವಿ. ಮೋಹನ್ ಮತ್ತು ಮಳವಳ್ಳಿ ಶಿವಣ್ಣ ಸೇರಿದಂತೆ ಐದೂ ಅಭ್ಯರ್ಥಿಗಳಿಗೆ ವಿಜಯಮಾಲೆ ಸಿಕ್ಕಿದೆ. ಬಿಜೆಪಿಯ ಲಿಂಗರಾಜು ಹಾಗೂ ರಘು ಕೌಟಿಲ್ಯ ಕೂಡ ನಿಗದಿತ ಕೋಟಾ ಪಡೆದು ಮೇಲ್ಮನೆ ಪ್ರವೇಶಿಸಿದ್ದಾರೆ. ಆದರೆ, ಚುನಾವಣೆಗೂ ಮುನ್ನವೇ ಜೆಡಿಎಸ್ ಶಾಸಕರ ನಡೆ ಹಾಗೂ ಜಿ.ಟಿ.ದೇವೇಗೌಡರ ಪ್ರತ್ಯೇಕ ಎಂಟ್ರಿಯಿಂದ ಶುರುವಾಗಿದ್ದ ಗೊಂದಲ ಕೊನೆಗೂ ನಿಜವಾಗಿದ್ದು, ಜೆಡಿಎಸ್ನ ನಾಲ್ಕು ಶಾಸಕರು ಸೇರಿದಂತೆ ಒಟ್ಟು ಆರು ಮಂದಿ ಮೈತ್ರಿಕೂಟದ ಶಾಸಕರು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಅವರ ಪರವಾಗಿ ವೋಟ್ ಹಾಕಿರುವುದು ಸ್ಪಷ್ಟವಾಗಿದೆ. ವಿಪಕ್ಷಗಳ ಈ ಆಂತರಿಕ ಒಡಕು ಮತ್ತು ಅಡ್ಡಮತದಾನದ ಲಾಭ ಪಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ತಂತ್ರಗಾರಿಕೆಗೆ ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಂತಾಗಿದೆ.
ಈ ಕ್ರಾಸ್ ವೋಟಿಂಗ್ ವಿದ್ಯಮಾನ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಒಳಗಿರುವ ಆಂತರಿಕ ಬಿರುಕು ಮತ್ತು ಅಸಮಾಧಾನವನ್ನು ಬಹಿರಂಗಪಡಿಸಿದೆ. ಲೋಕಸಭಾ ಚುನಾವಣೆಯ ನಂತರ ಉಭಯ ಪಕ್ಷಗಳ ನಾಯಕರ ಮಟ್ಟದಲ್ಲಿ ಹೊಂದಾಣಿಕೆ ಕಂಡುಬಂದರೂ, ಶಾಸಕರ ಮಟ್ಟದಲ್ಲಿ ತಳಮಟ್ಟದ ಭಿನ್ನಾಭಿಪ್ರಾಯಗಳು ಇನ್ನೂ ಬಗೆಹರಿದಿಲ್ಲ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. ಜೆಡಿಎಸ್ ಶಾಸಕರ ಮತಗಳು ಕೈತಪ್ಪಿರುವುದು ಅಥವಾ ಬಿಜೆಪಿಯ ಕೆಲವು ಅತೃಪ್ತ ಶಾಸಕರು ಆಡಳಿತ ಪಕ್ಷದತ್ತ ಒಲವು ತೋರಿರುವುದು ಮೈತ್ರಿಕೂಟದ ಭವಿಷ್ಯದ ಒಗ್ಗಟ್ಟಿಗೆ ಹಿಡಿದ ಕೈಗನ್ನಡಿಯಾಗಿದೆ. ಇದು ವಿರೋಧ ಪಕ್ಷಗಳಲ್ಲಿ ತಳಮಳ ಸೃಷ್ಟಿಸಿದೆ.
ಇನ್ನೊಂದೆಡೆ, ಕಾಂಗ್ರೆಸ್ ಪಕ್ಷಕ್ಕೆ ಈ ಫಲಿತಾಂಶ ಆಂತರಿಕವಾಗಿ ಭಾರಿ ಬಲವನ್ನು ನೀಡಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಜಂಟಿ ಕಾರ್ಯತಂತ್ರ ಪ್ರತಿಪಕ್ಷಗಳ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಶಾಸಕರ ಸಂಖ್ಯಾಬಲದ ಮೇಲಿನ ಅವರ ಹಿಡಿತವನ್ನು ಇದು ಸಾಬೀತುಪಡಿಸಿದೆ. ಕ್ರಾಸ್ ವೋಟಿಂಗ್ ಮೂಲಕ ವಿರೋಧ ಪಕ್ಷದ ಕೋಟೆಗೆ ಲಗ್ಗೆ ಇಟ್ಟಿರುವುದು ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಹೊಸ ಸಮೀಕರಣಗಳಿಗೆ ನಾಂದಿ ಹಾಡಬಹುದು. ಈ ಗೆಲುವು ಆಡಳಿತ ಪಕ್ಷಕ್ಕೆ ಮೇಲ್ಮನೆಯಲ್ಲಿ ಬಹುಮತ ಸಾಧಿಸಲು ನೆರವಾಗಿದೆ.



