ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ತೀವ್ರ ರಾಜಕೀಯ ಕಸರತ್ತುಗಳು ಈಗ ಅಂತಿಮ ಘಟ್ಟವನ್ನು ತಲುಪಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದ ಸಚಿವ ಸಂಪುಟ ಭರ್ತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ನಡೆದ ದೀರ್ಘ ಸಮಾಲೋಚನೆಯ ಬಳಿಕ ಅಂತಿಮ ಪಟ್ಟಿ ರೂಪುಗೊಂಡಿದೆ. ನೂತನ ಸಚಿವರಾಗಿ ಆಯ್ಕೆಯಾಗಿರುವ ಶಾಸಕರ ವಿವರಗಳನ್ನು ಹೈಕಮಾಂಡ್‌ನ ಅಧಿಕೃತ ಅನುಮೋದನೆ ಸಿಕ್ಕ ತಕ್ಷಣವೇ ಸಾರ್ವಜನಿಕವಾಗಿ ಪ್ರಕಟಿಸುವ ನಿರೀಕ್ಷೆಯಿದ್ದು, ರಾಜಭವನದಲ್ಲಿ ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಾಗಿ ಮೌಕಿಕ ಆದೇಶ ಸಿಕ್ಕಿದೆ ಎನ್ನಲಾಗಿದೆ.
ಈ ಸಂಪುಟ ವಿಸ್ತರಣೆ ಹಂತದಲ್ಲಿ ವಿವಿಧ ಭಾಗಗಳ ಪ್ರಾತಿನಿಧ್ಯ, ಸಾಮಾಜಿಕ ಸಮೀಕರಣಗಳು ಮತ್ತು ಅನುಭವ ಹಾಗೂ ಯುವ ಶಕ್ತಿಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಕೇಂದ್ರ ನಾಯಕತ್ವಕ್ಕೆ ದೊಡ್ಡ ಸವಾಲಾಗಿತ್ತು. ಬಹುತೇಕ ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಸುಳಿವು ಲಭ್ಯವಾಗಿದ್ದು, ಕೇವಲ ಹಿರಿಯ ನಾಯಕರನ್ನಷ್ಟೇ ಪರಿಗಣಿಸದೆ ಮೊದಲ ಬಾರಿಗೆ ಆಯ್ಕೆಯಾದ ಉತ್ಸಾಹಿ ಹಾಗೂ ಯುವ ಜನಪ್ರತಿನಿಧಿಗಳಿಗೂ ಮನ್ನಣೆ ನೀಡುವ ತಂತ್ರಕ್ಕೆ ಒಲವು ತೋರಲಾಗಿದೆ. ಸದ್ಯ ಬಾಕಿಯಿರುವ 20 ಸ್ಥಾನಗಳ ಪೈಕಿ 12 ಹೊಸಬರು, 6 ಹಿರಿಯರು ಹಾಗೂ ಎರಡು ಡಿಸಿಎಂ ಹುದ್ದೆಗೆ ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಂಪುಟ ವಿಸ್ತರಣೆ ಕೇವಲ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವ ಸಾಮಾನ್ಯ ಪ್ರಕ್ರಿಯೆಯಾಗಿರದೆ, ಆಡಳಿತ ಪಕ್ಷದ ಆಂತರಿಕ ರಾಜಕೀಯ ಸ್ಥಿರತೆಯನ್ನು ಕಾಯ್ದುಕೊಳ್ಳುವ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಪಕ್ಷದೊಳಗಿನ ತೀವ್ರ ಪೈಪೋಟಿ, ವಿಭಿನ್ನ ಬಣಗಳ ಬೇಡಿಕೆಗಳು ಮತ್ತು ಹಿರಿಯ ಆಕಾಂಕ್ಷಿಗಳ ಅಸಮಾಧಾನವನ್ನು ಶಮನಗೊಳಿಸಲು ಹೈಕಮಾಂಡ್ ನಡೆಸಿರುವ ಈ ಸಮತೋಲನದ ಯತ್ನ ಎಷ್ಟು ಯಶಸ್ವಿಯಾಗಲಿದೆ ಎಂಬುದು ಮುಂಬರುವ ದಿನಗಳಲ್ಲಿ ಸ್ಪಷ್ಟವಾಗಲಿದೆ. ಪ್ರದೇಶ ಮತ್ತು ಜಾತೀವಾರು ಸಮೀಕರಣಗಳನ್ನು ಸರಿದೂಗಿಸುವ ಪ್ರಕ್ರಿಯೆಯಲ್ಲಿ ಸೃಷ್ಟಿಯಾಗಬಹುದಾದ ಅಸಮಾಧಾನಗಳನ್ನು ತಡೆಗಟ್ಟುವುದು ಸರಕಾರಕ್ಕೆ ದೊಡ್ಡ ಪರೀಕ್ಷೆಯಾಗಿದೆ.
ಮತ್ತೊಂದೆಡೆ, ಯುವ ಹಾಗೂ ಹೊಸ ಮುಖಗಳಿಗೆ ಸಂಪುಟದಲ್ಲಿ ಆದ್ಯತೆ ನೀಡುವುದು ಶಾಸಕಾಂಗ ಪಕ್ಷಕ್ಕೆ ಉತ್ಸಾಹ ತುಂಬುವ ರಾಜಕೀಯ ಕಾರ್ಯತಂತ್ರವಾಗಿದೆ. ಹಿರಿಯ ನಾಯಕರ ಅನುಭವ ಮತ್ತು ಕಿರಿಯರ ಕ್ರಿಯಾಶೀಲತೆಯನ್ನು ಸಮ್ಮಿಳಿತಗೊಳಿಸುವ ಮೂಲಕ ಮುಂಬರುವ ಚುನಾವಣೆಗಳಿಗೆ ಹಾಗೂ ಆಡಳಿತ ಶಿಸ್ತಿಗೆ ಬಲ ತರಲು ಕಾಂಗ್ರೆಸ್ ನಾಯಕತ್ವ ಯೋಜನೆ ರೂಪಿಸಿದೆ. ನೂತನ ಸಚಿವರ ಆಯ್ಕೆ ಮತ್ತು ಅವರಿಗೆ ಹಂಚಿಕೆಯಾಗುವ ಖಾತೆಗಳು ಮುಂದಿನ ದಿನಗಳಲ್ಲಿ ಸರಕಾರದ ಕಾರ್ಯಕ್ಷಮತೆ ಹಾಗೂ ಪಕ್ಷದ ಒಳಗಿನ ಬಣ ರಾಜಕೀಯದ ದಿಸೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.



