Photo Credits: @raagu.vijay (Instagram)
ಆ ದಿನ ಕೆಫೆ ಕಾಫಿ ಡೇಲಿ ಆ ಚಂದದ ಹುಡುಗಿಯನ್ನ ನೋಡಿದ್ದರು. ನೋಡಿದ ಆ ಕ್ಷಣವೇ ಮನಸಲ್ಲಿ ಪ್ರೀತಿ ಮೊಳಕೆಯೊಡೆದಿತ್ತು. ಆದರೆ ಮೊದಲ ಭೇಟಿಯಲ್ಲೇ ಪ್ರೀತಿ ಹೇಳಲು ಅವರಿಗೆ ಸಾಧ್ಯವಾಗಲಿಲ್ಲ.
ಮತ್ತೊಮ್ಮೆ ಮತ್ತೊಂದು ಕಾಫಿ ಡೇಯಲ್ಲಿ ಅದೇ ಹುಡುಗಿ ಎದುರಾದರು. ಈ ಬಾರಿ ವಿಜಯ ರಾಘವೇಂದ್ರ ಚಾನ್ಸ್ ಮಿಸ್ ಮಾಡಿಕೊಳ್ಳಲೇ ಇಲ್ಲ. ಹೃದಯದಲ್ಲಿದ್ದ ಪ್ರೀತಿಯನ್ನು ಆಕೆಯ ಮುಂದೆ ಧೈರ್ಯವಾಗಿ ಹೇಳಿಯೇ ಬಿಟ್ಟರು.
ಮುಂದೆ ಇವರ ಸುಂದರ ಲವ್ ಸ್ಟೋರಿ ಅದ್ಭುತ ಮ್ಯಾರೇಜ್ ಸ್ಟೋರಿ ಆಯಿತು. ಕನ್ನಡ ಸಿನಿಮಾರಂಗದ ಮಾದರಿ ಜೋಡಿಗಳಲ್ಲಿ ಇವರದ್ದು ತುಂಬಾನೇ ಯೂನಿಕ್ ಕಥೆ. ಚಿನ್ನಾರಿ ಮುತ್ತ ಮತ್ತು ಸ್ಪಂದನಾ ಅವರ ಈ ಎವರ್‌ಗ್ರೀನ್ ಲವ್ ಸ್ಟೋರಿ ಇಲ್ಲಿದೆ.
ಕಾಫಿ ಡೇಲಿ ಶುರುವಾದ ಸೌಂಡ್ ಗಲಾಟೆ…
ನಟ ವಿಜಯ ರಾಘವೇಂದ್ರ ಅವರಿಗೆ ಕಾಫಿ ಕುಡಿಯುವುದು ಅಂದರೆ ಪಂಚಪ್ರಾಣ. ಮಲ್ಲೇಶ್ವರಂ ಕಾಫಿ ಡೇಗೆ ಅವರು ಸ್ನೇಹಿತರ ಜೊತೆ ಹೋಗುತ್ತಿದ್ದರು. ಆ ದಿನವೂ ಹಾಗೇ ಕಾಫಿ ಕುಡಿಯುತ್ತಾ ಹರಟೆ ಹೊಡೆಯುತ್ತಿದ್ದರು.
ಅದೇ ಸಮಯಕ್ಕೆ ಅಲ್ಲಿಗೆ ಬಂದ ಹುಡುಗಿಯೊಬ್ಬರು ಮ್ಯೂಸಿಕ್ ಸೌಂಡ್ ಜಾಸ್ತಿ ಮಾಡಲು ಹೇಳಿದರು. ಆದರೆ ವಿಜಯ ರಾಘವೇಂದ್ರ ಅವರಿಗೆ ಆ ಸೌಂಡ್ ತುಂಬಾನೇ ಕಿರಿಕಿರಿ ಎನಿಸಿತು. ಅವರು ತಕ್ಷಣವೇ ಸೌಂಡ್ ಕಡಿಮೆ ಮಾಡಲು ಅಲ್ಲಿನ ಹುಡುಗನಿಗೆ ತಿಳಿಸಿದರು.
ಹೀಗೆ ಇಬ್ಬರ ನಡುವೆ ಸಣ್ಣದೊಂದು ಮಾತಿನ ಚಕಮಕಿ ನಡೆದಿತ್ತು. ಅಲ್ಲಿಗೆ ಆ ಮೊದಲ ಭೇಟಿ ಮುಗಿದರೂ, ರಘು ಮನಸಿನಲ್ಲಿ ಸಣ್ಣದೊಂದು ಪ್ರೀತಿಯ ಸಂಚಲನ ಶುರುವಾಗಿತ್ತು.
ಬೈಕ್ ರೈಡ್ ಮತ್ತು ಮದುವೆ ಮನೆಯ ಎಲ್‌ಇಡಿ ಸ್ಕ್ರೀನ್…
ಕೆಲ ದಿನಗಳ ನಂತರ ಮತ್ತೊಂದು ಕಾಫಿ ಡೇಯಲ್ಲಿ ಅದೇ ಹುಡುಗಿ ಮತ್ತೆ ಸಿಕ್ಕರು. ಈ ಬಾರಿ ರಘು ಸುಮ್ಮನೆ ಇರದೆ ಮಾತನಾಡಿಸಿಯೇ ಬಿಟ್ಟರು. ಆ ಹುಡುಗಿಯನ್ನೇ ಮದುವೆಯಾಗಬೇಕು ಎಂಬ ಆಸೆ ಅವರಲ್ಲಿ ಮೂಡಿತು.
ಇದಕ್ಕಾಗಿ ಅವರ ಹಿಂದೆ ಬೈಕ್‌ನಲ್ಲಿ ಫಾಲೋ ಮಾಡಿದ ರೋಮ್ಯಾಂಟಿಕ್ ದಿನಗಳೂ ಇವೆ. ನಂತರ ಒಮ್ಮೆ ವಿಜಯ ರಾಘವೇಂದ್ರ ಒಂದು ಮದುವೆ ಸಮಾರಂಭಕ್ಕೆ ಹೋಗಿದ್ದರು. ಸ್ಪಂದನಾ ಅವರನ್ನ ಮದುವೆ ಮನೆಯ ಎಲ್ ಇಡಿ ಸ್ಕ್ರೀನ್ ಮೇಲೆ ವಿಜಯ್ ರಾಘವೇಂದ್ರ ನೋಡಿರುತ್ತಾರೆ.
ಅದನ್ನು ಕಂಡು ರಘು ಅವರ ಮುಖದಲ್ಲಿ ನಗು ಮೂಡಿತು. ಅದೇ ಹೊತ್ತಿಗೆ ರಘು ಅವರ ಮನೆಯಲ್ಲೂ ಮದುವೆಗೆ ಹುಡುಗಿ ಹುಡುಕುವ ಪ್ರಕ್ರಿಯೆ ನಡೆದಿತ್ತು.
ತಂದೆ ಚಿನ್ನೇಗೌಡರ ಜೊತೆ ಮಾತುಕತೆ ಮತ್ತು ಮದುವೆ…
ಒಂದು ದಿನ ತಂದೆ ಚಿನ್ನೇಗೌಡರು ಮದುವೆಯ ವಿಚಾರ ಎತ್ತಿದರು. ಆಗ ರಘು ತಾವು ಈಗಾಗಲೇ ಒಂದು ಹುಡುಗಿಯನ್ನು ಇಷ್ಟಪಟ್ಟಿರುವುದಾಗಿ ನೇರವಾಗಿ ಹೇಳಿದರು. ಮದುವೆ ಮನೆಯ ಸ್ಕ್ರೀನ್ ಮೇಲೆ ನೋಡಿದ ಹುಡುಗಿಯೇ ಅವಳು ಎಂದರು.
ಮುಂದೆ ಮನೆಯವರು ಹಿರಿಯ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಅವರ ಮನೆಗೆ ಹೋದರು. ಮಗಳು ಸ್ಪಂದನಾ ಅವರನ್ನು ತಮ್ಮ ಮನೆಗೆ ಸೊಸೆಯಾಗಿ ನೀಡುವಂತೆ ಕೇಳಿಕೊಂಡರು. ಎರಡೂ ಕುಟುಂಬಗಳ ಒಪ್ಪಿಗೆಯಿಂದ ಮಾತುಕತೆ ಸುಸೂತ್ರವಾಗಿ ಮುಗಿಯಿತು.
ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರದ್ದು ‘ಲವ್ ಕಮ್ ಅರೇಂಜ್ಡ್’ ಮ್ಯಾರೇಜ್ ಆಯಿತು. 2007ರ ಆಗಸ್ಟ್ 26ರಂದು ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೊಸ ಬಾಳು ಆರಂಭಿಸಿದರು.
ನೆನಪಿನಲ್ಲೇ ಉಳಿದ ಅಮರ ಜೋಡಿ…
ವಿಜಯ ರಾಘವೇಂದ್ರ ಸದಾ ಶಾಂತ ಸ್ವಭಾವದ ವ್ಯಕ್ತಿ. ಅವರ ಈ ಸ್ವಭಾವಕ್ಕೆ ಸ್ಪಂದನಾ ಅವರ ಸಪೋರ್ಟ್ ತುಂಬಾನೇ ದೊಡ್ಡದಾಗಿತ್ತು. ಇಬ್ಬರೂ ಸೇರಿ ಮಗ ಶೌರ್ಯನನ್ನು ಶಿಸ್ತಿನಿಂದ ಬೆಳೆಸಿದರು.
ಇಂದು ಸ್ಪಂದನಾ ದೈಹಿಕವಾಗಿ ನಮ್ಮೊಂದಿಗಿಲ್ಲದೇ ಇರಬಹುದು. ಆದರೆ ವಿಜಯ ರಾಘವೇಂದ್ರ ಅವರ ಹೃದಯದಲ್ಲಿ ಮತ್ತು ಕನ್ನಡಿಗರ ಮನಸಿನಲ್ಲಿ ಇವರ ಜೋಡಿ ಸದಾ ಎವರ್‌ಗ್ರೀನ್.
ಅಗಲಿದ ಮೇಲೂ ಜೀವಂತವಾಗಿರುವ ಇವರ ಪ್ರೀತಿ ನಿಜಕ್ಕೂ ಒಂದು ಮಾದರಿ. ಚಿನ್ನಾರಿ ಮುತ್ತನ ಬದುಕಿನ ಪ್ರತಿ ಪುಟದಲ್ಲೂ ಸ್ಪಂದನಾ ಅವರ ಹೆಸರು ಎಂದಿಗೂ ಹಚ್ಚ ಹಸಿರಾಗಿಯೇ ಇರುತ್ತದೆ.




